ಕೊಪ್ಪಳ ತಾಲೂಕ ಗ್ಯಾರಂಟಿ ಕಮಿಟಿಯಿಂದ ಸಂಸದ ರಾಜಣ್ಣಗೆ ಗೌರವ
ಜನರಿಗೆ ಗ್ಯಾರಂಟಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ : ಸಂಸದ ರಾಜಶೇಖರ
ಕೊಪ್ಪಳ: ಕರ್ನಾಟಕದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರಿಗೆ ಆರಂಭಿಸಿರುವ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ನೂತನ ಸಂಸದ ಕೆ. ರಾಜಶೇಖರ ಹಿಟ್ನಾಳ ಹೇಳಿದರು.
ಅವರು ನಗರದ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೊಪ್ಪಳ ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಸಮಿತಿಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕ ಸರಕಾರದ ಬಹುಮುಖ್ಯ ಸಮಾಜಮುಖಿ ಯೋಜನೆಯಾದ ಗ್ಯಾರಂಟಿ ಸ್ಕೀಂಗಳ ಸಮರ್ಪಕ ಅನುಷ್ಠಾನಕ್ಕೆ ಸರಕಾರೇತರ ಸಮಿತಿ ರಚನೆ ಮಾಡಿದ್ದು ಮೂರು ಹಂತದ ಸಮಿತಿಯನ್ನು ರಚಿಸಿ ಜನರಿಗೆ ಆಸರೆಯಾಗಿದೆ, ಬಹುತೇಕರಿಗೆ ಸೌಲಭ್ಯ ಸಿಕ್ಕಿದ್ದು, ಕೆಲವರಿಗೆ ತಾಂತ್ರಿಕ ಕಾರಣಗಳಿಂದ ಏನು ಸೌಲಭ್ಯ ಬಂದಿಲ್ಲ ಶೀಘ್ರ ಸರಿ ಮಾಡಲಾಗುವದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಬಿಜೆಪಿಗರ ಸುಳ್ಳು ಮಾತು ನಂಬಬೇಡಿ, ಗ್ಯಾರಂಟಿ ಐದು ವರ್ಷ ಪಕ್ಕಾ ಗ್ಯಾರಂಟಿ ಇರುತ್ತವೆ, ಕೊಪ್ಪಳ ತಾಲೂಕಿನ ಗ್ಯಾರಂಟಿ ಸದಸ್ಯರು ಉತ್ತಮ ಕೆಲಸ ಮಾಡಿದ್ದು, ತಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದರು.
ರಾಜ್ಯದ ಜನತೆಗೆ ಶಕ್ತಿ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮೀ, ಮತ್ತು ಯುವ ನಿಧಿ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿದ್ದು, ಸದರಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚಿಸಿದ್ದು ಚುನಾವಣೆ ನಂತರ ಮೊದಲ ಸಭೆ ನಡೆಸಿ ಚರ್ಚಿಸಿದರು.
ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಸ್ಯಾಮುವೇಲ್, ತಾಲೂಕ ಪಂಚಾಯತಿ ಕಾರ್ಯನಿರ್ವಾಹಣ ಅಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ ದುಂದಪ್ಪ ತುರಾದಿ, ಸದಸ್ಯರುಗಳಾದ ಜ್ಯೋತಿ ಮಂಜುನಾಥ ಗೊಂಡಬಾಳ, ದೇವರಾಜ ನಡುವಿನಮನಿ, ರಾಮಣ್ಣ ಚೌಡ್ಕಿ ಹಟ್ಟಿ, ರಮೇಶ ಹ್ಯಾಟಿ ಭಾಗ್ಯನಗರ, ಅನ್ನದಾನಸ್ವಾಮಿ ಸಾಲಿಮಠ ಬೆಟಗೇರಿ, ಪರಶುರಾಮ ಕೊರವರ, ಸವಿತಾ ಅಶೋಕ ಗೋರಂಟ್ಲಿ, ಮಂಜುನಾಥ ಅಂಗಡಿ, ಎ. ಧರ್ಮರಾಜರಾವ್, ಆನಂದಪ್ಪ ಕಿನ್ನಾಳ, ಲಕ್ಷ್ಮಣ ಡೊಳ್ಳಿನ್ ಮತ್ತು ಅನ್ವರ ಹುಸೇನ್ ಗಡಾದ, ಮಾನವಿ ಪಾಶಾ ಇತರರು ಇದ್ದರು.