ರಾಜ್ಯಮಟ್ಟದ ಬಾಲಗೌರವ ಪ್ರಶಸ್ತಿಗೆ ಸಾಹಿತ್ಯ ಗೊಂಡಬಾಳ ಆಯ್ಕೆ

ಕೊಪ್ಪಳ: ಇಲ್ಲಿನ ಶ್ರೀ ಚೈತನ್ಯ ಸಮೂಹ ಸಂಸ್ಥೆಯ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಕಾಲೇಜಿನ ದ್ವಿತಿಯ ಪಿಯು ವಿದ್ಯಾರ್ಥಿನಿ ಸಾಹಿತ್ಯ ಎಂ. ಗೊಂಡಬಾಳ ಕರ್ನಾಟಕ ಸರಕಾರದ ಬಾಲವಿಕಾಸ ಅಕಾಡೆಮಿ ಮೂಲಕ ಕೊಡುವ ರಾಜ್ಯಮಟ್ಟದ ಬಾಲಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.
ಅಕಾಡೆಮಿ ನೀಡಿರುವ ಆಯ್ಕೆ ಪಟ್ಟಿಯಲ್ಲಿ ೨೦೨೩-೨೪ ನೇ ಸಾಲಿನ ಬಹುಮುಖ ಪ್ರತಿಭೆ ವಿಭಾಗದಲ್ಲಿ ಸಮಾಜ ಸೇವಕರಾದ ಮಂಜುನಾಥ ಜಿ. ಗೊಂಡಬಾಳ ಮತ್ತು ಜ್ಯೋತಿ ಎಂ. ಗೊಂಡಬಾಳ ದಂಪತಿಯ ಪುತ್ರಿ ಬಹುಮುಖ ಪ್ರತಿಭೆ ಕು. ಸಾಹಿತ್ಯ ಎಂ. ಗೊಂಡಬಾಳ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಕಾಲೇಜಿನ ಸಿಬ್ಬಂದಿ, ಸಂಗೀತ ನೃತ್ಯ ಶಿಕ್ಷಕರು ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
ಸಂಗೀತ, ವೆಸ್ಟರ್ನ್ ನೃತ್ಯ, ಭರತನಾಟ್ಯ ಸೇರಿದಂತೆ ಗಿಟಾರ್ ವಾದನ, ಕೀಬೋರ್ಡ, ಹಾರ್ಮೋನಿಯಂ ನುಡಿಸುವದು, ಮತ್ತು ಮೌಥ್ ಪಿಯಾನೋದಲ್ಲಿ ಪರಿಣತಿ ಹೊಂದಿದ್ದು ಅನೇಕ ಉತ್ಸವ ಮತ್ತು ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಕು. ಸಾಹಿತ್ಯ ಕ್ರೀಡೆಯಲ್ಲೂ ಸಾಧನೆ ಮಾಡಿದ್ದು, ರಾಜ್ಯಮಟ್ಟದ ದಸರಾ ಸಿಎಂ ಕಪ್ ನೆಟ್ಬಾಲ್ ಸೇರಿ ಹಲವು ರಾಜ್ಯಮಟ್ಟದ ಪ್ರಶಸ್ತಿ, ಪೆಂಕಾಕ್ ಸಿಲತ್ನಲ್ಲಿ ರಾಜ್ಯ ಮತ್ತು ರಾಷ್ಟಮಟ್ಟದ ಪದಕ ಸೇರಿ ಜಂಪ್ ರೋಪ್ ಕ್ರೀಡೆ, ಕರಾಟೆ, ಏರ್ರೈಫಲ್ ನಲ್ಲಿ ಪ್ರಶಸ್ತಿ ಪಡೆದಿದ್ದಾಳೆ. ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಈಕೆಯ ಸಾಧನೆಗೆ ಪ್ರಶಸ್ತಿ ಪುರಸ್ಕಾರ ನೀಡಿದ್ದಾರೆ.
ಸದರಿ ಪ್ರಶಸ್ತಿಯನ್ನು ಡಿಸೆಂಬರ್ ೧೬ ರಂದು ಬೆಳಗಾವಿಯ ಸುವರ್ಣ ಸೌಧದ ಗಾಂಧಿ ಪ್ರತಿಮೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸೇರಿ ಹಲವು ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುತ್ತಿದೆ.

