ಕವಯತ್ರಿ, ಹೋರಾಟಗಾರ್ತಿ ಜೂಪಕ ಸುಭದ್ರ
‘ಹಿಂದೂ ರಾಷ್ಟ್ರವಾಗಿ ಮಾಡುವ ಸಂಚು
ಕೊಪ್ಪಳ, ಮೇ 25, 2024:
ವೈವಿಧ್ಯದ ಪ್ರತೀಕವೆನಿಸಿದ ಭಾರತದಲ್ಲಿ ಜನಸಾಮಾನ್ಯರ ಮೇಲೆ ಏಕರೂಪತೆಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂದು ಕವಯತ್ರಿ, ಹೋರಾಟಗಾರ್ತಿ ಜೂಪಕ ಸುಭದ್ರ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ ಶನಿವಾರ ‘ಮೇ ಸಾಹಿತ್ಯ ಮೇಳ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ನಮ್ಮಲ್ಲಿ ಹಲವಾರು ಸಮುದಾಯಗಳೂ ಹಲವಾರು ದೇವರುಗಳಿದ್ದರೂ ಅದನ್ನೆಲ್ಲ ದೂರ ಮಾಡಿ, ನಿರ್ದಿಷ್ಟ ಬಗೆಯ ದೇವರನ್ನೇ ಪೂಜಿಸುವಂತೆ ಜನರನ್ನು ಪ್ರೇರೇಪಿಸಲಾಗುತ್ತಿದೆ. ಸನಾತನ ಧರ್ಮವನ್ನು ರಾಜಕಾರಣಕ್ಕೆ ಬಳಸಿ, ಮತ-ಧರ್ಮ ದ್ವೇಷವನ್ನು ಸಮುದಾಯಗಳಲ್ಲಿ ಬಿತ್ತಲಾಗುತ್ತಿದೆ. ಚುನಾವಣೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಜಾಣತನದಿಂದ ಬದಿಗಿಟ್ಟು, ಮಂದಿರ- ಆಹಾರ- ಜಾತಿ- ಮತದ ಆಧಾರದ ಮೇಲೆ ಮತ ಕೇಳಲಾಗುತ್ತಿದೆ ಎಂದು ಅವರು ಕಿಡಿ ಕಾರಿದರು.
“ನಾನು ಯಾವ ಬಗೆಯ ಆಹಾರ ಸೇವಿಸಬೇಕು? ನಾನು ಯಾವ ಬಗೆಯ ಉಡುಪು ಧರಿಸಬೇಕು ಎಂಬುದನ್ನು ಬಲವಂತವಾಗಿ ಹೇರಲಾಗುತ್ತಿದೆ. ಸಂವಿಧಾನವು ನೀಡಿದ ಹಕ್ಕುಗಳನ್ನು ಮೊಟಕುಗೊಳಿಸಿ, ಏಕರೂಪತೆಯನ್ನು ಹೇರಲಾಗುತ್ತಿದೆ. ದಿನನಿತ್ಯ ಜನರು ಎದುರಿಸುವ ಸಮಸ್ಯೆಗಳನ್ನು ಪ್ರಸ್ತಾಪಿಸದೇ ಧರ್ಮ- ದ್ವೇಷದ ಪ್ರಚಾರವನ್ನು ಕೈಗೊಂಡು, ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ” ಎಂದು ಅವರು ಟೀಕಿಸಿದರು.
ಆರೆಸ್ಸೆಸ್ ಪ್ರಣೀತ ಸಿದ್ಧಾಂತವನ್ನು ರಹಸ್ಯವಾಗಿ ಸಮಾಜದ ಮೇಲೆ ಹೇರಿ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹವಣಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, “ಇಂಥ ಸಂಚನ್ನು ವಿರೋಧಿಸಿದ ಧಾಬೋಲ್ಕರ್, ಗೌರಿ ಲಂಕೇಶ್, ಎಂ.ಎಂ. ಕಲ್ಬುರ್ಗಿ ಅವರಂಥ ಚಿಂತಕರ ಜೀವ ತೆಗೆಯಲಾಗಿದೆ. ಆದರೆ ಇದರಿಂದ ಜನಪರ ಚಳವಳಿಗಳು ಹಿಂಜರಿಯಲಾರವು. ನಮಗೆ ಪ್ರಜಾಸತ್ತಾತ್ಮಕವಾಗಿ ಮಾತಾಡುವ ಹಕ್ಕನ್ನು ಸಂವಿಧಾನ ನೀಡಿದೆ. ಅದನ್ನು ಜಾಗೃತೆಯಿಂದ ಬಳಸಬೇಕಿದೆ” ಎಂದು ನುಡಿದರು.
“ರಾಮಮಂದಿರ ಸ್ಥಾಪನೆ ಬಳಿಕ ಅಜೆಂಡಾ ಏನು? ನಿರುದ್ಯೋಗ, ಬೆಲೆಯೇರಿಕೆ, ರೈತ ಸಮಸ್ಯೆಗಳನ್ನು ಎಲ್ಲೂ ಪ್ರಸ್ತಾಪಿಸದೇ ಧರ್ಮಾಧಾರಿತ ರಾಜಕಾರಣವನ್ನು ಯಾವ ಬಗೆಯಲ್ಲಿ ಬಳಸಬೇಕು ಎಂದು ಬಿಜೆಪಿ ಯೋಚಿಸುತ್ತಿದೆ. ನಮ್ಮ ಸಮುದಾಯಗಳು ನೀರು, ಭೂಮಿ, ಮರಗಳನ್ನು ಪೂಜಿಸುತ್ತವೆ. ಇಲ್ಲಿ ವಿವಿಧ ಭಾಷೆ ಮಾತನಾಡಲಾಗುತ್ತಿದೆ. ಬಗೆಬಗೆಯ ಆಹಾರ ಸೇವಿಸಲಾಗುತ್ತಿದೆ. ಆದರೆ ಅದನ್ನೆಲ್ಲ ನಿರ್ಲಕ್ಷ್ಯಿಸಿ, ಏಕರೂಪವನ್ನು ಬಲವಂತವಾಗಿ ಸಮಾಜದಲ್ಲಿ ಹೇರಲಾಗುತ್ತಿದೆ. ಬಿಜೆಪಿಯ ಈ ತಂತ್ರದ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಬೇಕು” ಎಂದು ಜೂಪಕ ಸುಭದ್ರ ಸಲಹೆ ಮಾಡಿದರು.