ಮೇ ಸಾಹಿತ್ಯ ಮೇಳ’ಕ್ಕೆ ಚಾಲನೆ
‘ಸಾಹಿತ್ಯವು ಜನಸಾಮಾನ್ಯರ ಬದುಕಿಗೆ ದಾರಿ ತೋರಲಿ’
ಕೊಪ್ಪಳ, ಮೇ 25, 2024:
ನೂರಾರು ಸಾಹಿತ್ಯಾಸಕ್ತರು, ಲೇಖಕರು, ಪ್ರಗತಿಪರ ಚಿಂತಕರು, ಹೋರಾಟಗಾರರ ಸಮ್ಮುಖದಲ್ಲಿ ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ ಶನಿವಾರ ಮೇ ಸಾಹಿತ್ಯ ಮೇಳಕ್ಕೆ ಚಾಲನೆ ನೀಡಲಾಯಿತು.
ವಿವಿಧ ಸಮುದಾಯಗಳ ಪ್ರತಿನಿಧಿಗಳಾದ ಬಸಮ್ಮ, ಜಂಬವ್ವ, ದುರ್ಗವ್ವ, ಶೋಭಾ ಮಠ, ನಿಂಗಜ್ಜ ಮತ್ತು ಬಣ್ಣಬಣ್ಣದ ದಿರಿಸು ಧರಿಸಿದ್ದ ಮಕ್ಕಳು ಜನರ ಕಿವಿಗಡಚಿಕ್ಕುವ ಚಪ್ಪಾಳೆಯ ಮಧ್ಯೆ ಸಾಹಿತ್ಯ ಮೇಳವನ್ನು ಉದ್ಘಾಟಿಸಿದರು.
ಸಂವಿಧಾನ ಪ್ರಸ್ತಾವನೆಯ ಪ್ರತಿಯನ್ನು ಅತಿಥಿಗಳಿಗೆ ಕೊಡುವ ಮೂಲಕ ಮೇಳ ಅಧಿಕೃತವಾಗಿ ಉದ್ಘಾಟನೆಯಾಯಿತು.
ಪ್ರಾಸ್ತಾವಿಕ ಮಾತನಾಡಿದ ಕವಿ ಬಸವರಾಜ ಹೂಗಾರ, ಪ್ರತಿರೋಧದ ಅಭಿವ್ಯಕ್ತಿಯಾಗಿ ಪ್ರತಿ ವರ್ಷ ಆಯೋಜನೆಯಾಗುವ ಈ ಸಾಹಿತ್ಯ ಮೇಳವು ತನ್ನದೇ ಆದ ಕಾರ್ಯವೈಖರಿಯಿಂದ ಹೆಸರು ಗಳಿಸಿದೆ ಎಂದು ಬಣ್ಣಿಸಿದರು. “ಸಾಹಿತ್ಯವೆಂದರೆ ಬರೀ ಅಕ್ಷರಗಳ ಬರಹವಲ್ಲ. ಅದು ಜನಸಮುದಾಯದ ಬದುಕನ್ನು ಅಭಿವ್ಯಕ್ತಿಸಬೇಕು. ಸಾಹಿತ್ಯವನ್ನು ಸಂಭ್ರಮಿಸದೇ ಜನರ ಬದುಕನ್ನು ಪ್ರತಿಬಿಂಬಿಸುವ ದಾರಿಯಾಗಿಯೂ ಪರಿಗಣಿಸಬೇಕು” ಎಂದು ಹೇಳಿದ ಹೂಗಾರ, ಆಯೋಜನೆ, ಸಲಹೆ- ಸ್ವೀಕಾರ ಹಾಗೂ ಪಾರದರ್ಶಕತೆಯಿಂದಾಗಿ ಮೇ ಸಾಹಿತ್ಯ ಮೇಳವು ಇತರ ಮೇಳಗಳಿಂದ ಭಿನ್ನವಾಗಿ ನಿಲ್ಲುತ್ತದೆ ಎಂದು ಹೇಳಿದರು.
ದಿಕ್ಸೂಚಿ ಮಾತುಗಳನ್ನಾಡಿದ ರೈತ ಹೋರಾಟಗಾರ ರಾಕೇಶ್ ಟಿಕಾಯತ್, ಚುನಾವಣೆ ಫಲಿತಾಂಶದ ಬಳಿಕವೂ ರೈತರ ಹೋರಾಟಗಳು ಎಂದಿನಂತೆಯೇ ಮುಂದುವರಿಯಲಿವೆ ಎಂದರು.
ಪಣಜಿಯ ಕೊಂಕಣಿ ಕವಿ ಹಾಗೂ ಸಾಮಾಜಿಕ ಹೋರಾಟಗಾರ ದಾಮೋದರ ಮೌಜೋ, ಸಮುದಾಯದಲ್ಲಿ ಸಮೂಹಪ್ರಜ್ಞೆಯನ್ನು ಬಡಿದೆಬ್ಬಿಸುವ ಪ್ರಯತ್ನಗಳು ನಡೆಯಬೇಕು. ಸಮಾಜವನ್ನು ಕೇಂದ್ರೀಕರಿಸಿ ಶಿಕ್ಷಣ, ಸಾಹಿತ್ಯ ಸೃಷ್ಟಿಸಿ ಜನಸಾಮಾನ್ಯರ ಬದುಕನ್ನು ಸಹನೀಯಗೊಳಿಸಬೇಕು ಎಂದು ಸಲಹೆ ಮಾಡಿದರು.
“ರೈತರು ಹೋರಾಟಗಾರರಾಗಬೇಕು. ಲೇಖಕ ವರ್ಗ ಸರಿಯಾದ ವರ್ಗದಲ್ಲಿ ನಡೆಯುತ್ತಿದೆಯಾ? ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಸಂವಿಧಾನದ ಹಕ್ಕುಗಳು ಸರ್ವರಿಗೂ ಸಮನಾಗಿ ದಕ್ಕಬೇಕು” ಎಂದೂ ಮೌಜೋ ಹೇಳಿದರು.
ತೆಲಂಗಾಣದ ಕವಯತ್ರಿ, ಹೋರಾಟಗಾರ್ತಿ ಜೂಪಕ ಸುಭದ್ರ ಮಾತನಾಡಿ, ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ದೂರವಿಟ್ಟು ಏಪರೂಪದ ಧರ್ಮಾಧಾರಿತ ರಾಜಕಾರಣವನ್ನು ಮುನ್ನಲೆಗೆ ತರಲಾಗಿದೆ ಎಂದು ಟೀಕಿಸಿದರು.
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಗೋಪಾಲಗೌಡ ಅಧ್ಯಕ್ಷತೆ ವಹಿಸಿದ್ದರು. ಟಿ. ರತ್ನಾಕರ, ಜೆ. ಭಾರದ್ವಾಜ್, ಕೆ. ವೆಂಕಟರಾಜು ಮತ್ತು ಮೆಹಮೂದ್ ಬೇಗಂ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಭಾರತ ಸಂವಿಧಾನದ ಪ್ರಸ್ತಾವನೆಯನ್ನು ರಮೇಶ ಗಬ್ಬೂರು ಓದಿದರು. ಕಾಶಪ್ಪ ಚಲವಾದಿ ಹಾಗೂ ಅನಿಲ ಹೊಸಮನಿ ಮೇಳದ ನಿರ್ಣಯಗಳನ್ನು ಮಂಡಿಸಿದರು. ಡಿ.ಎಂ. ಬಡಿಗೇರ ಸ್ವಾಗತಿಸಿದರು. ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಹಾಗೂ ಅಖಿಲಾ ವಿದ್ಯಾಸಂದ್ರ ನಿರೂಪಿಸಿದರು.