ಎಲುಬಿಲ್ಲದ ನಾಚಿಕೆ ಬಿಟ್ಟ ಅಧಿಕಾರ ಧಾಹಿ ಕುಮಾರಸ್ವಾಮಿ – ಸಂಜಯ್ ವಿರುದ್ಧ : ಜ್ಯೋತಿ ಆಕ್ರೋಶ
ಕೊಪ್ಪಳ : ಬಡವರ ಮೇಲೆ ಬಿಜೆಪಿ ಮೋದಿ ಸರಕಾರ ಹೊರಿಸಿರುವ ಬೆಲೆ ಏರಿಕೆ ಭಾರ ಕಡಿಮೆ ಮಾಡಲು ಕಾಂಗ್ರೆಸ್ ಸರಕಾರ ತಂದಿರುವ ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ಹಾದಿತಪ್ಪಿದ್ದಾರೆ ಎಂದ ಕುಮಾರಸ್ವಾಮಿ ನಿಜವಾದ ಹಾದಿಬಿಟ್ಟ ವ್ಯಕ್ತಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ ಪ್ರಾಧಿಕಾರ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿ ಸರಕಾರ ನಡೆಸುವ ವಿವೇಚನ ಇದ್ದರೂ ಅಧಿಕಾರದ ದಾಹಕ್ಕೆ ಕುಟುಂಬ ರಾಜಕಾರಣದ ಪೋಷಣೆಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದು ಅವರು ರಾಜಕೀಯದಲ್ಲಿ ಇರುವದಕ್ಕೆ ಲಾಯಕ್ಕಿಲ್ಲ ಎಂದಿದ್ದಾರೆ.
ಬಡವರು ಮೋದಿಯ ಸುಳ್ಳಿನಿಂದ ಕಂಗೆಟ್ಟಿದ್ದು ದುಡಿಮೆ ಇಲ್ಲದ ಬದುಕಿಗೆ ಬೆಲೆ ಏರಿಕೆ ಭಾರದ ಜೊತೆಗೆ ಉದ್ಯೋಗ ನಷ್ಟದ ಸಂಕಟಕ್ಕೆ ಸ್ಪಂದಿಸಿ ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಆಸರೆ ಒದಗಿಸಿದ್ದನ್ನು ಹಂಗಿಸುವ ಜೊತೆಗೆ ಗೃಹಲಕ್ಷ್ಮೀಯ ಎರಡು ಸಾವಿರ ಹಣದಿಂದ ಮಹಿಳೆಯರು ಹಾದಿ ಬಿಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ, ಹಾಗಾದರರೆ ನಮ್ಮ ತಾಯಂದಿರು ಅಕ್ಕತಂಗಿಯರು ಎರಡು ಸಾವಿರದಿಂದ ಕುಟುಂಬಕ್ಕೆ ಆಸರೆಯಾಗಿದೆ, ಅವರೇನು ಶೋಕಿ ಮಾಡಿ ಪ್ಯಾಟಿ ತಿರುಗುತ್ತಾರೆಯೇ, ಕುಮಾರಸ್ವಾಮಿಯವರ ಹೇಳಿಕೆ ಅಕ್ಷರಶಃ ಅಕ್ಷಮ್ಯ ಅಪರಾಧವಾಗಿದ್ದು ಅವರು ಕೂಡಲೇ ಮಂಡ್ಯ ಚುನಾವಣೆ ಕಣದಿಂದ ನಿವೃತ್ತಿ ಘೋಷಿಸಬೇಕು. ಇಲ್ಲ ಮಹಿಳೆಯರೇ ಅವರನ್ನು ರಾಜಕೀಯದಿಂದ ಓಡಿಸುತ್ತಾರೆ ಎಂದು ತಿಳಿಸಿದ್ದಾರೆ.
ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಅನ್ನುವ ಹಾಗೆ ಬಿಜೆಪಿ ಜನಪ್ರತಿನಿಧಿಗಳ ಜತೆ ಸೇರಿ ಅವರ ಹೊಲಸಾಟ ಸುಮಾರಸ್ವಾಮಿಗೂ ಬಡಿದಿದ್ದು, ಹಣ ಸಿಕ್ಕ ತಕ್ಷಣ ಹೆಣ್ಣುಮಕ್ಕಳು ಹಾದಿಬಿಡುತ್ತಾರೆ ಎನ್ನುವದಾದರೆ ತಮ್ಮಂತಹ ಕುಟುಂಬದ ಜನ ಹೇಗೆ ಇದ್ದಾರೆ ಎಂದು ಜನರಿಗೆ ತಿಳಿಸುವಂತೆ ಸವಾಲು ಹಾಕಿದ್ದಾರೆ.
ಅದೇ ರೀತಿ ಬಿಜೆಪಿ ಮಾಜಿ ಶಾಸಕ ಸಂಜಯ್ ಸಹ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಬಗ್ಗೆ ಕುಡಿದು ತೇಲಾಡುತ್ತಾರೆ ಎನ್ನುವ ಹೇಳಿಕೆ ನೀಡಿರುವದೂ ಸಹ ಹೆಣ್ಣುಮಕ್ಕಳು ಮುಕ್ತವಾಗಿ ಓಡಾಡುವದು, ಸ್ವತಂತ್ರವಾಗಿ ಯೋಚಿಸುವದು, ರಾಜಕೀಯ ಶಕ್ತಿ ಪಡೆಯುವದು, ಆನಂದದ ಬದುಕು ರೂಪಿಸಿಕೊಳ್ಳದೇ ಕೇವಲ ಕತ್ತಲ ಕೂಪದಲ್ಲಿ ಬದುಕಬೇಕು ಎಂಬ ಅವರ ಮನುವಾದದ ಆಲೋಚನೆ ವಿರುದ್ಧ ಧಿಕ್ಕಾರ ಕೂಗುವ ಕಾಲ ಬಂದಿದೆ, ಡಾ. ಅಂಬೇಡ್ಕರ್ ಅವರ ಸಿದ್ಧಾಂತ ಮತ್ತು ಸಂವಿಧಾನ ಬದುಕಿರುವವರೆಗೆ ಇಂತಹ ಎಷ್ಟು ಹುಳುಗಳು ಬಂದರೂ ಎದುರಿಸಲು ಸಿದ್ದವಾಗಿರುವದಾಗಿ ಹೇಳಿದ್ದಾರೆ. ನಾನೂ ಹೆಬ್ಬಾಳ್ಕರ್ ಅಭಿಯಾನ ಮಾಡುವದಾಗಿ ಜ್ಯೋತಿ ಎಂ. ಗೊಂಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆ : ಜಿಲ್ಲಾ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಅಶೋಕ ವೃತ್ತದಲ್ಲಿ ಎಪ್ರಿಲ್ ೧೫ ರಂದು ಬೆಳಿಗ್ಗೆ ೧೦.೩೦ಕ್ಕೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಮಹಿಳಾಪರ ಮನಸ್ಸುಗಳು ಪಾಲ್ಗೊಳ್ಳುತ್ತಿದ್ದಾರೆ.