ಹುಲಗಿ ಪಾದಯಾತ್ರೆ ಮಾಡಿ; ರಾಜಶೇಖರ ಹಿಟ್ನಾಳ ನಾಮಪತ್ರ ಸಲ್ಲಿಸಿದರು
– ಕಾಂಗ್ರೆಸ್ ಅಭ್ಯರ್ಥಿಗೆ ಶಾಸಕರು, ಮುಖಂಡರ ಸಾಥ್
ಕೊಪ್ಪಳ:
ನಗರದ ಜಿಲ್ಲಾಡಳಿತ ಭವನದಲ್ಲಿ
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಸಾಂಕೇತಿಕವಾಗಿ ಚುನಾವಣಾಧಿಕಾರಿ ನಲಿನ್ ಅತುಲ್ ಅವರಿಗೆ ಶನಿವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿ ಮಾತನಾಡಿದ ಕೆ. ರಾಜಶೇಖರ ಹಿಟ್ನಾಳ, ದೇಶಾದ್ಯಂತ ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಎಲ್ಲೇಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ದೇಶದಲ್ಲಿ ಇಂಡಿಯಾ ಕೂಟ ದೆಹಲಿಯ ಗದ್ದುಗೆ ಏರಲಿದೆ. ನರೇಂದ್ರ ಮೋದಿಯವರ ಸುಳ್ಳಿನ ಆಶ್ವಾಸನೆಗಳಿಗೆ ಜನ ಈ ಬಾರಿ ಮಣೆ ಹಾಕಲ್ಲ. ಮೋದಿಯವರ ಪಾಪದ ಕೊಡ ತುಂಬಿದೆ ಎಂದರು.
ಏ.16ರಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಿ, ಸಾರ್ವಜನಿಕವಾಗಿ ನಾಮಪತ್ರ ಸಲ್ಲಿಸುತ್ತೇನೆ. ಅಂದು ಸಚಿವರಾದ ಎಚ್.ಕೆ ಪಾಟೀಲ್, ಜಮೀರ ಅಹ್ಮದ್, ಶಾಸಕ ಲಕ್ಷ್ಮಣ ಸವದಿ, ಮಾಜಿ ಸಚಿವ ಆಂಜನೇಯ ಸೇರಿದಂತೆ ಪಕ್ಷದ ಅನೇಕ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಏ. 27ಕ್ಕೆ ಸಿಎ. ಸಿದ್ದರಾಮಯ್ಯನವರು ಸಿಂಧನೂರು, 30ಕ್ಕೆ ಗಂಗಾವತಿ ಹಾಗೂ ಮೇ 1ರಂದು ಕುಷ್ಟಗಿಗೆ ಆಗಮಿಸಿ, ಮತಯಾಚಿಸಲಿದ್ದಾರೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ. ಗಂಗಾವತಿಯಲ್ಲಿನ ನಾಯಕರ ಮುನಿಸು ಶಮನಗೊಂಡಿದ್ದು, ಎಲ್ಲರೂ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತ ಪ್ರಶ್ನೆಗೆ, ಸಂಗಣ್ಣನವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ನಮ್ಮ ನಾಯಕರು ಅವರ ಜತೆ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅವರನ್ನು ಕರೆದಿದ್ದು ನಿಜ. ಆದರೆ, ಮುಂದಿನ ಬೆಳವಣಿಗೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಬಾಕ್ಸ್…
ಹುಲಿಗೆಮ್ಮದೇವಿಗೆ ಪಾದಯಾತ್ರೆ:
ತಾಲೂಕಿನ ಹಿಟ್ನಾಳ ಗ್ರಾಮದ ಬನ್ನಿಮಹಾಕಾಳಮ್ಮ ದೇವಸ್ಥಾನದಿಂದ ಸುಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಶನಿವಾರ ಬೆಳಗ್ಗೆ
ಪಾದಯಾತ್ರೆ ಮೂಲಕ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡರು. ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರಿಗೆ ಮುಖಂಡರು
ಮತ್ತು ಕಾರ್ಯಕರ್ತರು ಪಾದಯಾತ್ರೆಯುದ್ದಕ್ಕೂ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಸಿರಗುಪ್ಪ ಶಾಸಕ ಬಿ.ಎಂ. ನಾಗರಾಜ್, ಕಾಂಗ್ರೆಸ್ ಮುಖಂಡರಾದ ಎಸ್.ಬಿ. ನಾಗರಳ್ಳಿ, ಆಸೀಫ್ ಅಲಿ, ಗೂಳಪ್ಪ ಹಲಗೇರಿ ಇದ್ದರು.
ಫೋಟೋ ಕ್ಯಾಪ್ಸನ್:- 01 ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಶನಿವಾರ ನಾಮಪತ್ರ ಸಲ್ಲಿಸಿದರು.
ಫೋಟೋ ಕ್ಯಾಪ್ಸನ್:- 02 ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿಗೆ ಕೆ. ರಾಜಶೇಖರ ಹಿಟ್ನಾಳ ಅವರು ವಿಶೇಷ ಪೂಜೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದರು.