ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವದರೊಂದಿಗೆ ದೇಶಕ್ಕೆ ಕೊಡುಗೆ
ಕೊಪ್ಪಳ: ನಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯುವದು ಅಂದರೆ ಕೇವಲ ಪದವಿಗಳಿಸುವದಲ್ಲ, ಅವರು ಸಂಸ್ಕಾರಯುತರಾಗಿ ದೇಶಕ್ಕೆ ಕೊಡುಗೆಯಾಗಬೇಕು ಅದು ನಿಜವಾದ ಶಿಕ್ಷಣ ಎಂದು ರಾಯಚೂರಿನ ಎಜೆ ಅಕಾಡಮಿ ನಿರ್ದೇಶಕ ಮೊಹಮ್ಮದ್ ಅಬ್ದುಲ್ಲಾ ಜಾವೇದ್ ಅಭಿಪ್ರಾಯಪಟ್ಟರು.
ಅವರು ನಗರದ ಸಾಹಿತ್ಯ ಭವನದಲ್ಲಿ ಈಚೆಗೆ ನಡೆದ ಎ.ಆರ್. ವಿಸ್ಡಮ್ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ೪ನೇ ವಾರ್ಷಿಕೋತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಮೋಕ್ಷ ಪಡೆಯುವದು ಅಂದರೆ ಕೇವಲ ದೇವರ ಪ್ರಾರ್ಥನೆ ಮಾಡುವದಲ್ಲ, ದೇವರಂತಹ ಕೆಲಸ ಮಾಡುವದು. ಹಣ ಗಳಿಸುವದು ದೊಡ್ಡಸ್ಥಿಕೆಯಲ್ಲ ನಮ್ಮ ಮನಸ್ಸಿಗೆ ಸಂತೋಷ ನೀಡುವ ಮತ್ತು ಒಳ್ಳೆಯ ಕೆಲಸ ಮಾಡುವದು ದೊಡ್ಡದು, ಗಲ್ಫ್ ದೇಶದಲ್ಲಿ ಇಂಜಿನಿಯರ್ ಆಗಿದ್ದ ಖಾದ್ರಿಯವರು ಒಳ್ಳೆಯ ಸಂಬಳದ ಅಲ್ಲಿನ ಕೆಲಸ ಬಿಟ್ಟು ತಮ್ಮ ಊರಿನ ಮಕ್ಕಳ ಭವಿಷ್ಯಕ್ಕೆ ಇಂತಹ ಶಾಲೆಯನ್ನು ನಡೆಸುತ್ತಿರುವದು ಸಮಾಜಕ್ಕೆ ಅವರ ಕೊಡುಗೆ ಶ್ಲಾಘನೀಯ ಎಂದರು.
ಮಕ್ಕಳ ಭವಿಷ್ಯ ರೂಪಿಸುವ ದೃಷ್ಟಿಯಲ್ಲಿ ಅವರು ಪಡುತ್ತಿರುವ ಶ್ರಮ ಬಹಳ ದೊಡ್ಡದು. ನಮ್ಮ ಮಕ್ಕಳು ನಮ್ಮನ್ನು ನೋಡಿ ಕಲಿಯುವದು ಜಾಸ್ತಿ, ಅವರು ಕೇವಲ ಹೇಳಿದ್ದನ್ನು ಮಾಡುವದಿಲ್ಲವಾದ್ದರಿಂದ ನಾವು ಮೊದಲು ತಪ್ಪು ಮಾಡುವದು, ಸುಳ್ಳು ಹೇಳುವದನ್ನು ಬಿಡಬೇಕು, ದೇಶದಲ್ಲಿ ಪರಿಸ್ಥಿತಿ ಚನ್ನಾಗಿಲ್ಲ, ನಮ್ಮ ಮಕ್ಕಳ ಭವಿಷ್ಯಕ್ಕೆ ಶಿಕ್ಷಣವೊಂದೇ ಅಂತಿಮ ಪರಿಹಾರ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಸೈಯದ್ ಖಾಜಾಮೊಯಿನುದ್ದೀನ್ ಖಾದ್ರಿ, ಮುನಿರಾಬಾದ್ ಪ್ರೌಢ ಶಾಲೆಯ ಉರ್ದು ಶಿಕ್ಷಕಿ ಶಮೀನುನ್ನಿಸಾ, ವೆಲ್ಫೇರ್ ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಬಿಹಾ ಸುಲ್ತಾನಾ ಪಟೇಲ್, ರಾಜ್ಯ ಇಸ್ಲಾಮಿಕ್ ಬಾಲಕಿಯರ ಸಂಘದ ಅಧ್ಯಕ್ಷೆ ಸೀಮತಾಜ್ ಹುಮನಾಬಾದ್, ನಿವೃತ್ತ ಉಪ ತಹಶೀಲ್ದಾರ್ ಲಾಯಕ್ ಅಲಿ, ಖಾಸಗಿ ಶಾಲೆಗಳ ಒಕ್ಕೂಟ ಕುಸುಮಾದ ಅಧ್ಯಕ್ಷ ಶಾಯೀದ್ ತಹಸೀಲ್ದಾರ್, ವೆಲ್ಫೇರ್ ಪಾರ್ಟಿ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಅಲೀಮುದ್ದೀನ್, ಶಿಕ್ಷಣ ಇಲಾಖೆಯ ಸಿಆರ್ಪಿ ರೇವಣ್ಣ ಕೋಳೂರ, ಅಬ್ದುಲ್ ಮಜೀದ್ ಸಿದ್ದಖಿ, ನಿವೃತ್ತ ಶಿಕ್ಷಕ ಉರ್ದು ಕವಿ ಅನ್ವರ್ ಹುಸೇನ್, ಗೌಸ್ಸಾಬ್ ಸರದಾರ್, ಮೊಹಮ್ಮದ್ ಅಲಿ ಮೌಲಾನಾ, ಸಿರಾಜ್ ಮೌಲಾನಾ, ಆರಿಫ್ ಮೌಲಾನಾ, ಸೈಯದಾ ಮುಬಿನಾ, ಸೈಯದಾ ಅಸ್ಫಿಯಾ ಖಾದ್ರಿ, ಮುಖ್ಯೋಪಾದ್ಯಾಯಿನಿ ತನ್ವೀರ್ ಬೇಗಂ, ಸೈಯದಾ ಆಸೀಮಾ ಬೇಗಂ ಸೇರಿ ಅನೇಕರು ಇದ್ದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಖುರಾನ್ ಪಠಣ ಮೊಹಮ್ಮದ್ ಜಫರ್ ಮತ್ತು ಮೊಹಮ್ಮದ್ ಜೈಯಿದ್ ಮಾಡಿದರು. ಬೀಬಿ ಶೀಮಾ ಸಿದ್ದಖಿ ಸ್ವಾಗತಿಸಿದರು, ಸೈಯದಾ ಸೋಬಿಯಾ ಮತ್ತು ಅಷ್ಫಕ್ ಮೌಲಾನಾ ನಿರ್ವಹಿಸಿದರು ಮತ್ತು ಶಹಾನಾ ಅಲ್ಮಾಸಿ ವಂದಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವು.