ಇಂದಿನಿಂದ ಎರಡು ದಿನ ರಾಜ್ಯ ಮಟ್ಟದ ನೆಟ್ಬಾಲ್ ಪಂದ್ಯಾಟ
* ಕಂಗೊಳಿಸುತ್ತಿರುವ ಕ್ರೀಡಾಂಗಣ * ಹೊಸ ಇತಿಹಾಸಕ್ಕೆ ಸಾಕ್ಷಿಯಾಗಲಿದೆ ಕೊಲ್ಲೂರು
ಕೊಲ್ಲೂರು: ಸುಸಜ್ಜಿತವಾದ ಆಟಗಳನ್ನು ನಡೆಸುವ ಉದ್ದೇಶದಿಂದ ಸಾಧ್ಯವಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ, ರಾಜ್ಯದಲ್ಲಿ ನಡೆಯುತ್ತಿರುವ ಇತರೆ ಕ್ರೀಡಾಪಟುಗಳಿಗಿಂತ ಉತ್ತಮವಾಗಿ ನಡೆಸುತ್ತಿದ್ದೇವೆ ಎಂಬ ಖುಷಿ ಹೆಮ್ಮೆ ಇದೆ ಎಂದು ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ವರ್ಗೀಸ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಸಭಾ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯಮಟ್ಟದ ಕ್ರೀಡಾಕೂಟ ವೀಕ್ಷಕರಾಗಿ ಆಗಮಿಸಿದ್ದ ಮಂಡ್ಯದ ಮರಿಗೌಡ ಅವರು ಮಾತನಾಡಿ, ಉತ್ತಮ ನಿರ್ಣಾಯಕ ತಂಡವಿದೆ, ಅವರ ನಿರ್ಣಯವೇ ಅಂತಿಮವಾಗಿರುತ್ತದೆ, ತಳಕುಪಟ್ಟಿಯನ್ನು ಸರ್ವರ ಸಮ್ಮುಖದಲ್ಲಿ ಮಾಡಲಾಯಿತು ಎಂದರು.
ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ.ಬಿ. ಅವರು ಮಾತನಾಡಿ, ಮೂರು ಗಂಟೆಗೆ ಮೆರವಣಿಗೆ ಇರುತ್ತದೆ ನಂತರ ಉದ್ಘಾಟನಾ ಸಮಾರಂಭ ವರ್ಣರಂಜಿತವಾಗಿ ನಡೆಯಲಿದೆ. ಶಕ್ತಿ ಸ್ಥಳದಲ್ಲಿ ಕಾರ್ಯಕ್ರಮ ನಡೆಯುತ್ತಿದೆ, ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ಭರವಸೆ ಇದೆ ಎಂದರು.
ಕ್ರೀಡಾಕೂಟದ ವ್ಯವಸ್ಥಾಪಕ ಸುಕೇಶ ಶೆಟ್ಟಿ ಅವರು ಮಾತನಾಡಿ, ತಮ್ಮ ವ್ಯವಸ್ಥೆ ಮತ್ತು ಸಂಘಟನೆಗೆ ಶಕ್ತಿಯಾದ ಪ್ರೇಮನಾಥ ಶೆಟ್ಟಿ ಅವರನ್ನು ಅವರ ಅನುಪಸ್ಥಿತಿಯಲ್ಲಿ ನೆನಪಿಸಿಕೊಂಡ ಅವರು, ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯ ಗೆಲುವು ಮುಖ್ಯ. ಒಳ್ಳೆಯ ಅನುಭವಿ ತೀರ್ಪುಗಾರರು ಇರುವಸರಿಂದ ಗೊಂದಲ ಉಂಟು ಮಾಡುವದು ಬೇಡ. ರಾಜ್ಯದ ವಿವಿಧ ಭಾಗದಿಂದ ಮಕ್ಕಖು ಬಂದಿದ್ದು ಇಲ್ಲಿ ಯಾವುದೇ ತಪ್ಪುಗಳು ಆಗದಂತೆ ಅಶಿಸ್ತು ಆಗದಂತೆ ಎಚ್ಚರಿಕೆಯಿಂದ ಇರುವಂತೆ ಕರೆ ಕೊಟ್ಟರು.
ಪದವಿಪೂರ್ವ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶ ಮತ್ತು ಸಲಹೆಯಂತೆ ಉತ್ತಮ ವ್ಯವಸ್ಥೆ ಮಾಡಿದ್ದೇವೆ, ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿರಿ, ಮಕ್ಕಳು ಕ್ರೀಡಾಕೂಟದ ಪರಿಸರದಲ್ಲಿಯೇ ಇದ್ದು ಪರಿಸರವನ್ನು ಅನುಭವಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದೈ. ಶಿ. ಶಿ. ಸಂಘದ ರಾಜ್ಯ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ, ಉಡುಪಿ ಜಿಲ್ಲಾ ಸಂಚಾಲಕರಾದ ದಿನೇಶ ಕುಮಾರ, ಪದವಿಪೂರ್ವ ಶಿಕ್ಷಣ ಇಲಾಖೆಯ ಗಿರೀಶ್, ಕ್ರೀಡಾಕೂಟದ ಸಂಘಕರಾದ ನವೀನ ಜೈನ್ ಮೂಡಬಿದರೆ, ಶರತ್ ರಾವ್ ಕಾರ್ಕಳ, ಶರತ್ ರಾವ್ ಕಾರ್ಕಳ, ಸಚಿನ್ ಶೆಟ್ಟಿ ಇತರರು ಇದ್ದರು.
ನವಂಬರ್ 22 ಮತ್ತು 23 ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆಯಲಿದೆ ಮತ್ತು ಅದರ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಸುಮಾರು 26 ಬಾಲಕಿಯರ ತಂಡಗಳು ಮತ್ತು 28 ಬಾಲಕರ ತಂಡಗಳು ಪಾಲ್ಗೊಳ್ಳಲಿವೆ. ದೇವಸ್ಥಾನ ಸಮಿತಿಯಿಂದ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ದಿನದ ಪಂ್ಯಾಟದ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳು,ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.