ದೊಡ್ಡಾಟ ಕಲಾವಿದ ರಾಜಣ್ಣಗೆ ಜಾನಪದ ಪ್ರಪಂಚ ರಾಜ್ಯ ಪ್ರಶಸ್ತಿ
ಕೊಪ್ಪಳ: ಇಲ್ಲಿನ ಬಸವೇಶ್ವರ ನಗರದ ನಿವಾಸಿ, ಖಾಸಗಿ ಬ್ಯಾಂಕ ನೌಕರ ರಾಜಶೇಖರ ಮಹಾದೇವಪ್ಪ ದೊಡ್ಡಮನಿ ಅವರಿ ಕನ್ನಡ ಜಾನಪದ ಪರಿಷತ್ ಕೊಡಮಾಡುವ ಪ್ರತಿಷ್ಠಿತ ಜಾನಪದ ಪ್ರಪಂಚ ರಾಜ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಜಾನಪದ ಎಸ್. ಬಾಲಾಜಿ ಪ್ರಶಸ್ತಿಯನ್ನು ಪ್ರಕಟಿಸಿದ್ದು ಕೊಪ್ಪಳದ ರಾಜಶೇಖರ ಮಹಾದೇವಪ್ಪ ದೊಡ್ಡಮನಿ ಅವರನ್ನು ಸೇರಿಸಿ ರಾಜ್ಯದ ೨೦ ಜನರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಂಘಟಕ, ಉತ್ತಮ ಅಧಿಕಾರಿ ಆಗಿದ್ದ ದಿ. ಟಿ. ಕೆ. ಗೌಡ ಅವರು ಸ್ಥಾಪಿಸಿದ ದತ್ತಿಯಿಂದ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿಯು ೫ ಸಾವಿರ ನಗದು ಪುರಸ್ಕಾರ ಜೊತೆಗೆ ರಾಜ್ಯಮಟ್ಟದ ಗೌರವ ಸನ್ಮಾನ ಒಳಗೊಂಡಿದೆ.
ಬೆಂಗಳೂರಿನ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಸ್ವಾಯತ್ತ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಕ್ಟೋಬರ್ ೨೬ ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ರಾಜಶೇಖರ ಅವರು ಸತತ ೨೯ ವರ್ಷದಿಂದ ಸಂಪೂರ್ಣ ರಾಮಾಯಣ ಬಯಲಾಟವನ್ನು ಆಡುತ್ತಿದ್ದು, ವಿಶೇಷವಾಗಿ ಅದರಲ್ಲಿ ಬರುವ ಸ್ತ್ರೀ ಪಾತ್ರಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಾರೆ, ಅವರು ಕಿರಿಯರಿಗೆ ನಿರಂತರ ಮಾರ್ಗದರ್ಶನ ಮಾಡುವದರ ಜೊತೆಗೆ ಸಂಗೀತ ಮಾಸ್ತರ್ ಆಗಿ ಬಯಲಾಟವನ್ನು ನಡೆಸುವ ಪರಿ ಯಾರನ್ನಾದರೂ ಮಂತ್ರಮುಗ್ಧರನ್ನಾಗಿಸುತ್ತದೆ.
ಪ್ರಶಸ್ತಿ ಪುರಸ್ಕೃತರ ವಿವರ: ಗಂಗಾಧರ ಹನುಮಂತ ಬಡಿಗೇರ ವಿಜಯಪುರ, ಎಚ್. ಸಿ. ನಂಜುಂಡೇಶ್ವರ ಸ್ವಾಮಿ ಚಿಕ್ಕಮಗಳೂರು, ಪುಟ್ಟಸ್ವಾಮಿ ಗುಂಡಾಪುರ ಮಂಡ್ಯ, ಗುಂಡು ಪೂಜಾರಿ ಉಡುಪಿ, ರಾಜಶೇಖರ ಮಹದೇವಪ್ಪ ದೊಡ್ಡಮನಿ ಕೊಪ್ಪಳ, ಸೋಬಾನೆ ಕೆಂಪಮ್ಮ ರಾಮನಗರ, ಲಕ್ಷ್ಮಮ್ಮ ತುಮಕೂರು ರಾಮಪ್ಪ ಗೊಂದಲಿ ವಿಜಯನಗರ, ಸೋಲಗಿತ್ತಿ ಅಶ್ವ ಪಾರ್ವತಮ್ಮ ದಾರೋಜಿ ಬಳ್ಳಾರಿ, ನಾಗರಾಜ ದುರ್ಗಪ್ಪ ಚಿತ್ರದುರ್ಗ, ಡುಂಬಯ್ಯ ನಲಿಕೆ ದಕ್ಷಿಣ ಕನ್ನಡ, ಹೊನ್ನಪ್ಪ ಬೊಮ್ಮಯ್ಯ ನಾಯಕ ಉತ್ತರ ಕನ್ನಡ, ಮಹಾಂತಯ್ಯ ಸ್ವಾಮಿ ಕಂಬಳಿಮಠ ರಾಯಚೂರು, ಭೀಮಪ್ಪ ಭಜಂತ್ರಿ ಬಾಗಲಕೋಟೆ, ಫಕೀರಪ್ಪ ನಾಗಪ್ಪ ಬಡಿಗೇರ ಬೆಳಗಾವಿ, ಎಚ್ ಸಿ ಶಿವಬುದ್ದಿ ಮೈಸೂರು, ಹುಚ್ಚಪ್ಪ ಡಿ. ಶಿವಮೊಗ್ಗ, ಧನುರಾಮ ಆಲೈಪ್ಪ ಲಮಾಣಿ ಗದಗ.