ಬಿಜೆಪಿಯ ಅಧಿಕಾರದ ಲಾಲಸೆಗೆ ಈ ದುರ್ವತನೆಗಳೇ ಸಾಕ್ಷಿ : ಜ್ಯೋತಿ
ಕೊಪ್ಪಳ: ಕೇಂದ್ರದ ಗೃಹ ಮಂತ್ರಿಗಳು ತಾವು ಎಂತಹ ಅಪರಾಧದ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ, ಇನ್ನು ರಾಜ್ಯದ ಸಿಟಿ ರವಿಯ ವರ್ತನೆಯೂ ಜಗತ್ತಿಗೆ ಗೊತ್ತಿರುವ ವಿಷಯ ಇವರ ಅಧಿಕಾರದ ಲಾಲಸೆಗೆ ಈ ರೀತಿಯ ಮಾತುಗಳು ಬರುತ್ತಿವೆ ಎಂದು ಕಾಂಗ್ರೆಸ್ ಮುಖಂಡರು, ಗ್ಯಾರಂಟಿ ಸಮಿತಿ ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ ಹೇಳಿಕೆ ನೀಡಿದ್ದಾರೆ.
ದೇಶದ ಸಂವಿಧಾನವನ್ನು ರಚಿಸಿ ಸರ್ವರಿಗೂ ಬದುಕುವ ಹಕ್ಕು ಕೊಟ್ಟ ಧೀಮಂತ ನಾಯಕ ಬಾಬಾಸಾಹೇಬರ ಹೆಸರನ್ನು ಹೇಳಿದರೆ ಗೃಹ ಮಂತ್ರಿ ಎನಿಸಿಕೊಂಡ ಪುಣ್ಯಾತ್ಮನಿಗೆ ಶೋಕಿ ಅನಿಸುತ್ತಿದೆ, ತಾವು ಶೋಕಿಗಾಗಿ ಶ್ರೀರಾಮನ ಹೆಸರನ್ನು, ಪರಮ ಭಕ್ತ ಹನುಮನ ಹೆಸರನ್ನು ಹೇಳಿಕೊಂಡು ತಿರುಗಿದಂತೆ ಭಾವಿಸಿರುವ ಅಮಿತ್ ಶಾ ಅವರನ್ನು ಕೂಡಲೇ ಸರಕಾರ ವಜಾಗೊಳಿಸಬೇಕು ಇಲ್ಲವಾದರೆ ಅವರ ಹೇಳಿಕೆಯನ್ನು ಕೇಂದ್ರ ಸರಕಾರದ ಬಿಜೆಪಿಯ ಹೇಳಿಕೆ ಎಂದೇ ಪರಿಭಾವಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಇನ್ನು ರಾಜ್ಯದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಎಂಬಾತ ಹಗಲಲ್ಲೂ ನಶೆಯಲ್ಲಿ ಇದ್ದ ರೀತಿಯಾಗಿ ಮಾತನಾಡಿ, ಹೆಣ್ಣುಮಗಳ ಬಗ್ಗೆ ಅತ್ಯಂತ ವಿಷಾಧಕರ ಮಾತನ್ನು ಆಡಿದ್ದು ಅಲ್ಲದೇ ಬಿಜೆಪಿ ಮುಖಂಡರು ಸಿಟಿ ರವಿ ಪರವಾಗಿ ಬೀದಿಗಳಿದು ಪ್ರತಿಭಟನೆ ಮಾಡುತ್ತಾರೆ ಅಂದರೆ ಅವರಿಗೆ ಸಂವಿಧಾನದ ಬಗ್ಗೆ, ಹೆಣ್ಣುಮಕ್ಕಳ ಬಗ್ಗೆ ಮತ್ತು ಶೋಷಿತರ ಪರವಾಗಿ ಇರುವ ಸರಕಾರಗಳ ಬಗ್ಗೆ ಇರುವ ಅಸಹನೀಯದ ಭಾಗವಾಗಿ ಈ ರೀತಿಯ ಹೇಳಿಕೆಗಳು ಮತ್ತು ಮಾತುಗಳು ಬರುತ್ತವೆ ಎಂದು ಜ್ಯೋತಿ ಎಂ. ಗೊಂಡಬಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.