ಕೊಪ್ಪಳ ಮೇ ಸಾಹಿತ್ಯ ಮೇಳ ಮುಗಿದರೂ ನಿಲ್ಲದ ಕನವರಿಕೆಗಳು !!
ರಾಜ್ಯದ ಮೂಲೆ ಮೂಲೆಯಿಂದ ಬಂದವರಲ್ಲಿ ಕೆಲವರ ಅನಿಸಿಕೆಗಳನ್ನು ಇಲ್ಲಿ ದಾಖಲಿಸಲಾಗಿದೆ
ಅಕ್ಷರ ಟಿವಿ ಕನ್ನಡ, ಬದಲಾವಣೆ ಸುದ್ದಿ ಜಾಲ:
ಕೊಪ್ಪಳ : ಇಲ್ಲಿ ಮೇ ೨೫ ಮತ್ತು ೨೬ ರಂದು ಎರಡು ದಿನಗಳ ಕಾಲ ನಡೆದ ಮೇ ಸಾಹಿತ್ಯ ಮೇಳ ಹತ್ತನೆಯದು, ಇದು ಮೇ ಮೇಳದ ದಶಕದ ಸಂಭ್ರಮ, ಆದರೂ ಆಡಂಬರವಿಲ್ಲದೇ ನಡೆದ ಈ ಮೇಳ ಸ್ಥಳಿಯರನ್ನು ಆಕರ್ಷಿಸಲು ವಿಫಲವಾದರೂ ಅದರ ಕನವರಿಕೆಯನ್ನು ನಿಲ್ಲಿಸಲು ಆಗುತ್ತಿಲ್ಲ, ಮೇಳ ಮುಗಿದ ಮೇಲೆ ಹಲವರು ಎಚ್ಚರಗೊಂಡಂತೆ ಕಾಣುತ್ತಿದೆ, ಯಾಕೋ ಏನೋ ಎಲ್ಲೋ ಒಂದು ಕಡೆ ಮಿಸ್ ಆಗಿದೆ ಎಂದು ಅನಿಸುತ್ತಿದೆ, ಸಂಘಟಕರ ಜವಾಬ್ದಾರಿಯುತ ನಡೆ, ಉದ್ದೇಶ ಎಲ್ಲವೂ ಸ್ಪಷ್ಟವಾಗಿದ್ದರೂ ಸಹ ಕೆಲವರು ತಮ್ಮಿಂದ ಅದನ್ನು ಅಲ್ಲಾಡಿಸದಂತೆ ನೋಡಿಕೊಂಡರು ಎಂಬ ಭಾವ ನನ್ನದು.
ನಾನೇ ನಾನಾಗಿ ಮೇ ಸಾಹಿತ್ಯ ಮೇಳವನ್ನು ಕಟ್ಟಿದ ಪತ್ರಕರ್ತ, ಚಿಂತಕ ಬಸವರಾಜ ಸೂಳಿಬಾವಿ ಅವರನ್ನು ಸಂಪರ್ಕಿಸಿ ಕೊನೆ ಘಳಿಗೆಯಲ್ಲಿ ಜೊತೆಯಾದೆ, ಅಷ್ಟರಲ್ಲಿ ಆಗಲೇ ಆಮಂತ್ರಣ ಪತ್ರಿಕೆ ಸಹ ಬಂದಿತ್ತು. ನನಗೆ ಅಲ್ಲಿ ಹೆಸರಿನ ಅಗತ್ಯ ಅನಿಸಲಿಲ್ಲ, ಆ ಕ್ಷಣಕ್ಕೆ ಒಂದು ಚಿಂತನೆ ನಮ್ಮ ನಾಡಲ್ಲಿ ಹುಟ್ಟಿದೆ ಅದು ಬೆಳೀಬೇಕು ಸಮಾಜಕ್ಕೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ನಮ್ಮ ಪತ್ರಿಕೆ ಬದಲಾವಣೆ ಹಾಗೂ ಅಕ್ಷರ ಟಿವಿ ಕನ್ನಡ ಡಿಜಿಟಲ್ ಮೀಡಿಯಾವನ್ನು ಜೊತೆಯಗಿಸಿಕೊಂಡು ಎರಡು ಪೂರ್ಣ ದಿನ ಅಲ್ಲಿಯೇ ಇದ್ದು ಡಿಜಿಟಲ್ ನೇರ ಪ್ರಸಾರ ಮಾಡಿದೆ, ಸಾಮಾನ್ಯವಾಗಿ ಇದಕ್ಕೆ ೫೦ ಸಾವಿರ ರೂಪಾಯಿಗಳನ್ನು ಚಾಜ ಮಾಡಲಾಗುತ್ತದೆ, ನಾನು ಇಲ್ಲಿ ಉಚಿತವಾಗಿ ಅದನ್ನು ಮಾಡಿದೆ, ಹಲವು ಚಾನಲ್ಗಳಿಗೆ ಸಹಕಾರಿ ಆಗಲಿ ಎಂದು ನನ್ನ ಚಾನಲ್ ವಿಜುವಲ್ಸ್ ಗಳನ್ನು ವಾಟರ್ ಮಾರ್ಕ ಇಲ್ಲದಂತೆಪ್ಲೇ ಮಾಡಿದೆ, ನಮ್ಮ ವಿಡಿಯೋ ತಗೊಂಡರೂ ಸಹ ಅವರು ನಮ್ಮ ಕೃಪೆ ಹಾಕದೇ, ತಮ್ಮ ಚಾನಲ್ ವಾಟರ್ ಮಾರ್ಕ ಹಾಕಿಕೊಂಡು ಪ್ರಸಾರ ಮಾಡಿದರು, ಅದು ಏನೇ ಇರಲಿ. ಅಸಲಿ ವಿಷಯ ಮೇ ಮೇಳದ ಒಂದಷ್ಟು ನೆನವುಗಳನ್ನು ಹಂಚಿಕೊಳ್ಳುವ ಉದ್ದೇಶ ನನ್ನದು. ಅದಕ್ಕಾಗಿ ಈ ಬರಹ.
ಇದು ಸರಕಾರದ ಅನುದಾನವನ್ನು ಪಡೆಯದೇ ಮಾಡಿದ ಕಾರ್ಯಕ್ರಮ, ಜನಪ್ರತಿನಿಧಿಗಳನ್ನು ದೂರವಿಸಿರಿ ಮಾಡಿದ ಮೇಳ, ಕಸಾಪ ದಂತಹ ಸರಕಾರಿ ಕೃಪೆಯ ಸಮ್ಮೇಳನಗಳನ್ನು ಮೀರಿಸುವ ಜ್ಞಾನ ಸಂಪತ್ತು, ಮೇ ಮೇಳ ಸಮ್ಮೇಳನ ಅಲ್ಲ ಆದರೆ ಕೂಡುವಿಕೆ ಇತ್ತು, ವ್ಯಾಪ್ತಿ ಇಲ್ಲ ಆದರೂ ವಿಶ್ವ ವ್ಯಾಪಿ ಆತು, ರಾಷ್ಟ್ರೀಯ ಚಿಂತಕರು ಬಂದು ಯಶಸ್ವಿಗೊಳಿಸಿದರು. ಇಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಜನ ಬಂದು ಖುಷಿಪಟ್ಟರು. ಇನ್ನಷ್ಟು ಏನಾದರೂ ಮಾಡಬೇಕು ಎಂದೆನಿಸಿದರೂ ಕಷ್ಟಸಾಧ್ಯ ಎನ್ನುವಂತಿತ್ತು.
ಹೋಳಿಗೆ ಊಟವನ್ನೂ ಮಾಡಿಸಿದ ಸಂಘಟಕರು, ಅಚ್ಚುಕಟ್ಟುತನಕ್ಕೆ ಮೆಚ್ಚಿಗೆ ಪಡೆದರು, ಗದುಗಿನ ಲಡಾಯಿ ಪ್ರಕಾಶ ನೇತೃತ್ವದ ಈ ಮೇಳಕ್ಕೆ ಅನೇಕ ಸ್ಥಳಿಯ ಸಂಘಟನೆಗಳು ಸಾಥ್ ನೀಡಿದವು, ಅನೇಕರು ಸಾಥ್ ಆದರು.
ಚಿತ್ರಕಲಾ ಪ್ರದರ್ಶನ, ಕ್ರಾಂತಿ ಸಂಗೀತ, ಕವಿಗೋಷ್ಠಿ, ಚಿಂತನ ಗೋಷ್ಠಿ ಮತ್ತು ಪುಸ್ಕತ ಪ್ರರ್ದಶನಗಳಿದ್ದವು. ನಾನೂ ಸಹ ನನ್ನ ಧರ್ಮಪತ್ನಿ ಜ್ಯೋತಿ ಗೊಂಡಬಾಳ ಜೊತೆಗೆ ಎರಡು ದಿನ ಸಾಹಿತ್ಯವನ್ನು ಆಸ್ವಾದಿಸಿದೆ, ಇಂತಹ ಮೇಳಗಳಲ್ಲಿ ಗಂಡ ಹೆಂಡತಿ ಇಬ್ಬರೂ ಇದ್ದರೆ ಚನ್ನ, ಅನೇಕ ವಿಷಯಗಳಿಗೆ ಸಹಮತಿ ಇರುತ್ತದೆ ಎಂದನಿಸಿದ್ದು ಸುಳ್ಳಲ್ಲ, ಜೊತೆಗೆ ಸಾವಿರಾರು ರುಪಾಇಗಳ ಪುಸ್ತಕ ಖರೀದಿಸಿದೆವು, ಮನೆಗೆ ತಗೊಂಡು ಹೋಗಿ ರ್ಯಾಕ್ ಸೇರಿಸುವ ಬದಲಿಗೆ ಇಬ್ಬರೂ ಓದಲು ಶುರು ಮಾಡಿದ್ದೇವೆ, ಹಾಗಾದರೆ ಕಾರ್ಯಕ್ರಮ ಹೇಗೆ ನಡೆಸಿದರು, ಲಕ್ಷಾಂತರ ರುಪಾಯಿ ದುಡ್ಡು ಎಲ್ಲಿಂದ ತಂದರು ಎಂಬ ಚಿಂತೆಯೂ ಸಹ ಅನೇಕರಿಗೆ ಕಾಡಬಹುದು ಅದಕ್ಕಾಗಿ ಹೇಳುತ್ತಿದ್ದೇನೆ, ನಾನೇ ನೋಡಿದ್ದೇನೆ, ಇದಕ್ಕೆ ರಾಜ್ಯದ ಸಮಾನ ಮನಸ್ಕ ಚಿಂತಕರು, ಪ್ರಜಾತಂತ್ರದ ಉಳಿವಿಗೆ ತಮ್ಮನ್ನು ಅರ್ಪಿಸಿಕೊಂಡವರು, ಸರಕಾರಿ ನೌಕರಿಯಲ್ಲಿದ್ದು ಸಾಹಿತ್ಯದ ಒಲವು ಇದ್ದವರು ಜೊತೆಗೆ ಬಸೂ ( ಬಸವರಾಜ ಸೂಳಿಬಾವಿ ) ಅವರ ಕೆಲಸವನ್ನು ಮೆಚ್ಚಿದವರು ಸ್ವಯಂ ಪ್ರೇರಣೆಯಿಂದ ಒಂದು ಸಾವಿರದಿಂದ ೧೦ ಸಾವಿರದವರೆಗೆ ಸಹಾಯ ಮಾಡಿದ್ದಾರೆ, ಜನ ಸಂಘಟನೆ ಮುಂದೆ ಯಾವುದೂ ನಿಲ್ಲಲ್ಲ ಎನ್ನುವದಕ್ಕೆ ಮೇ ಸಾಹಿತ್ಯ ಮೇಳ ಉತ್ತಮ ಉದಾಹರಣೆ. ಕಾರ್ಯಕ್ರಮ ಮಾಡಿದವರಿಗೆ ಇದರಲ್ಲಿ ಹಣ ಉಳಿಸಿ ಮನೆ ನಡೆಸುವ ದರ್ದು ಇಲ್ಲ, ಆಸ್ತಿ ಮಾಡುವ ದುರಾಸೆಯೂ ಇಲ್ಲ, ಎಲ್ಲವೂ ಪಾರದರ್ಶಕ ಅದಕ್ಕೆ ಇದು ಸಾಧ್ಯವಾಯಿತು, ಇನ್ನೊಂದು ಸಂಗತಿ ಬಸೂ ಅವರ ಜೊತೆಗೆ ಅನೇಕ ಮಹಿಳಾ ಸಂಘಟಕರೂ ಜೊತೆಯಾಗಿದ್ದು ಕಾರಣ, ಬಸೂ ಅವರ ಸಿಟ್ಟು ಸಹ ಮೇಳಕ್ಕೆ ಕೊಡುಗೆ ನೀಡಿದೆ ಎನ್ನಲು ಅಡ್ಡಿಯಿಲ್ಲ.
ಒಟ್ಟಾರೆಯಾಗಿ ಸ್ಥಳಿಯ ಕೇವಲ ೧೦ ರಿಂದ ೨೦ ಜನರ ಸಹಭಾಗಿತ್ವ ದೂರದ ೮೦ ರಷ್ಟು ಜನರಿಂದ ಮೇ ಯಶಸ್ವಿಯಾಯಿತು, ನಮ್ಮ ಅಕ್ಷರ ಟಿವಿ ಕನ್ನಡ ಯುಟ್ಯೂಬ್ ಮತ್ತು ವೆಬ್ನಲ್ಲಿ ಎಲ್ಲಾ ನೇರ ಪ್ರಸಾರ ಮತ್ತು ಸುದ್ದಿಗಳಿವೆ.
ಅನೇಕರು ಸಮ್ಮೇಳನದ ನಂತರ ಅದನ್ನು ಮೆಲಕು ಹಾಕುತ್ತಿದ್ದು, ಕನವರಿಸುತ್ತಿದ್ದಾರೆ, ಅದರಲ್ಲಿ ನನಗೆ ಸಿಕ್ಕ ಕೆಲವು ಕನವರಿಕೆಗಳನ್ನ ಇಲ್ಲಿ ದಾಖಲಿಸಿದ್ದೇನೆ.
_ ಮಂಜುನಾಥ ಜಿ. ಗೊಂಡಬಾಳ ಸಂಪಾದಕ, ಬದಲಾವಣೆ ದಿನಪತ್ರಿಕೆ, ಕೊಪ್ಪಳ.
ಅನಿಸಿಕೆಗಳು : ಸೈದ್ಧಾಂತಿಕ ಬದ್ಧತೆ ಜೊತೆಗೆ ಅದನ್ನು ಕಾರ್ಯರೂಪಕ್ಕೆ ತರುವ ನಿಮ್ಮ ಪ್ರಯತ್ನಕ್ಕೆ ನಮ್ಮಂತ ಯುವ ಜನಾಂಗವು ನಿಮಗೆ ಅಭಾರಿ. ನೇರ ನುಡಿಯಲ್ಲೂ, ಸದಾ ನಗುಮೊಗದ, ತಾಯಿ ಹೃದಯಿ ಅನುಪಮ ಮೇಡಂ ಗೂ ನಾವು ಧನ್ಯರು. ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನೆಗಳು ಮತ್ತು ಹೃತ್ಪೂರ್ವಕ ಧನ್ಯವಾದಗಳು..?? ಮುಂದಿನ ಕಾರ್ಯಕ್ರಮಕ್ಕೆ ನಿಮ್ಮ ಜೊತೆ ಹೆಜ್ಜೆ ಹಾಕುತ್ತೇವೆ
– ದಾದಾ ಹಯಾತ್
ಮೇ ಸಾಹಿತ್ಯ ಮೇಳ ತುಂಬಾ ಯಶಸ್ವಿಯಾಯಿತು..
ಈ ಮೇಳ ಇಷ್ಟವಾಗೋದು ಯಾಕಂದ್ರೆ ಇದಕ್ಕೆ ರಾಜಕೀಯದ ನಂಟಿಲ್ಲ…ಅನ್ನೊ ಕಾರಣಕ್ಕಾಗಿ.
ನನಗಂತೂ ಇದು ಒಂದು ಮಾದರಿ ಸಂಘಟನಾತ್ಮಕ ಮೇಳ..
ಧಾರವಾಡ, ಗದಗ, ವಿಜಯಪುರ, ಕೊಪ್ಪಳ ಇಲ್ಲಿ ನಡೆದಿರೊ ಎಲ್ಲ ಸಮ್ಮೇಳನಗಳಲ್ಲೂ ನಾನೂ ಭಾಗವಹಿಸಿದ್ದೇನೆ.. ವರ್ಷದಿಂದ ವರ್ಷಕ್ಕೆ ಇದರ ವ್ಯಾಪ್ತಿ ಹೆಚ್ಚಾಗ್ತಾನೆ ಇದೆ.. ಖುಷಿ ಕೊಡುವ ವಿಷಯ. ವೈಚಾರಿಕ ನೆಲ್ಲೆಯಲ್ಲಿ ಆಯೋಜನೆಗೊಂಡ ಪ್ರತಿ ಗೋಷ್ಟಿಗಳು ಕೂಡಾ ತುಂಬಾ ವಾಸ್ತವಕ್ಕೆ ಅವಶ್ಯಕವಿರುವ ವಿಷಯಗಳಿಂದ ಕೂಡಿದ್ದವು.
ಈ ವರ್ಷ ಈ ಸಮ್ಮೇಳನದ ಭಾಗವಾಗಿ ಕವಿಗೋಷ್ಟಿಯಲಿ ನನಗೆ ಅವಕಾಶಕೊಟ್ಟು ನನ್ನನ್ನು ಬರಹದಲ್ಲಿ ಮತ್ತಷ್ಟು ತೊಡಗಿಕೊಳ್ಳಲು ಪ್ರೆರೆಪಿಸಿದ ಬಸೂ ಸರ ಅವರಿಗೂ ಅನುಪಮಾ ಮೆಡಮ್ ಅವರಿಗೂ ತುಂಬು ಪ್ರೀತಿಯ ಧನ್ಯವಾದಗಳು.
ಕವಿತೆಗೆ ಸಿಕ್ಕ ಪ್ರತಿಕ್ರಿಯೆಗೆ ನಾನು ಮೂಕಸ್ತಬ್ದ. ಕಾವ್ಯ ಮತ್ತು ಕಾವ್ಯ ವಾಚನದ ಕುರಿತು ಸಾಕಷ್ಟು ಜನ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೂಡಾ ನಾನು ಅದರಿಂದ ಹೊರಬಂದಿಲ್ಲ..
ಅಂತಹ ವೇಧಿಕೆಯನ್ನು ಒದಗಿಸಿದ ತಮಗೆ ಮನಃಪೂರ್ವಕ ನಮಸ್ಕಾರಗಳು…
– ಸುರೇಶ ಎಲ್. ರಾಜಮಾನೆ, ರನ್ನಬೆಳಗಲಿ
ಮಳೆ ಬಂದು ನಿಂತಾಗ ಆಯಿತು
ವೈಚಾರಿಕ ಚಿಂತನೆ, ಅದ್ಭುತ ಆಡುಗಳನ್ನ ಇನ್ನೂ ನನ್ನ ಕಿವಿಯಲ್ಲಿ ಗೂಂಯಿ ಅನಾತಾಯಿದೆ,
ವಡಿಲಾ೯ ಅವನ ಚಮ೯ ಕಿಳ್ರಲಾ. ಹೇ….. ಚೈವಿಕಿದಾರ,
ನನ್ನವ್ವ ಬೆವರುತ್ತಾಳೆ, ಇಂತಹ ಅನೇಕ ಕವಿಗಳ ಕಾವ್ಯ ರಚನೆ ಕೆಳಿ ಅನುಭವಾಮೃತವನ್ನು ಪಡೆದ ನಾನು ಧನ್ಯನಾದೆ.
– ಶೇಖರ್ ಗಾಣಿಗ
ಮೇ ಸಾಹಿತ್ಯ ಮೇಳವನ್ನು ಅಲ್ಲಮ ಪ್ರಭು ಬೆಟ್ಟದೂರು, ಬಸು ಸರ್, ಅನುಪಮ ಮೇಡಂ ಮತ್ತು ಇತರೆ ಎಲ್ಲಾ ಪ್ರಗತಿಪರ ಮನಸ್ಸುಗಳು ಒಂದಾಗಿ ಸೇರಿ ಜನರ ಮನಸ್ಸುಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೇ ಎಂಬುದರಲ್ಲಿ ಸಂಶಯವಿಲ್ಲ. ಅನಿವಾರ್ಯ ಕಾರಣಗಳಿಂದ ನನಗೆ ಈ ಬಾರಿ ಮೇಳದಲ್ಲಿ ಭಾಗವಹಿಸಲು ಆಗದಿದ್ದುದಕ್ಕೆ ನನಗೆ ವಿಷಾದವಿದೆ. ಮುಂದಿನ ಬಾರಿ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಜನಸಮೂಹವನ್ನು ತಲುಪಲು ಎಲ್ಲರೂ ಒಂದಾಗಿ ಪ್ರಯತ್ನ ಮಾಡೋಣ, ಮೇಳವನ್ನು ಯಶಸ್ವಿಯಾಗಿಸಲು ಕಂಕಣ ಬದ್ಧರಾಗಿ ದುಡಿದ ಎಲ್ಲರಿಗೂ ನನ್ನ ವಂದನೆಗಳು.
– ಪ್ರಸನ್ನ
ನಮ್ನಮ್ಮ ಊರು ಸೇರಿದರೂ ಸಮಾನ ಮನಸ್ಕರ ಆ ‘ಮೇಳ’ದ ಗುಂಗಿನಿಂದ ಪೂರ್ತಿ ಹೊರಬರಲಾಗುತ್ತಿಲ್ಲ. ವೇದಿಕೆಯಲ್ಲಿ ಪಾದರಸದಂತೆ ಹರಿದಾಡುತ್ತಿದ್ದ ಹಸನ್ಮುಖಿ ‘ಅನುಪಮೆ’ ಮತ್ತು ನಗುಮುಖದಲ್ಲಿಯೇ ಉಪಾಯವಾಗಿ ‘ದನ’ಗಳಂತೆ ನಮ್ಮನ್ನು ವೇದಿಕೆಯತ್ತ ಅಟ್ಟುತ್ತಿದ್ದ ‘ಬಸೂ’ ಕಾಳಜಿ ಮರೆಯಲಾಗದ ಅನುಭವ, ಮೂಕ ಸಕ್ಕರೆ ಮೆದ್ದಂತೆ!
– ಈರಪ್ಪ ಕಂಬಳಿ
ಅಬ್ಬಾ!!
ಸೋಜಿಗದ ಕ್ಷಣಗಳನ್ನು ಕಳೆಯುವ ಅವಕಾಶ ನನಗೆ ಕೊಟ್ಟಿದ್ದಕ್ಕೆ ಧನ್ಯವಾದಗಳು…
ಅದು ಸಾಹಿತ್ಯ ಮೇಳವಷ್ಟೇ ಅಲ್ಲ. ಸಮಾನ ಮನಸ್ಸುಗಳ ಸಮ್ಮಿಲನದ ಮೇಳ….
ನನಗೆ ವ್ಯಯಕ್ತಿಕವಾಗಿ, ನನ್ನ ಮುಖಪುಟದ ಅನೇಕ ಸ್ನೇಹಿತರು, ಹಾಗೂ ನಾನು ಮೆಚ್ಚುವ ಅನೇಕ ಉತೃಷ್ಟ ಸಾಹಿತಿಗಳನ್ನು ಮುಖಾಮುಖಿಯಾಗಿಸಿ ಅವರ ಜೊತೆಯಲ್ಲಿ ಒಂದಿಷ್ಟು ಪ್ರೀತಿಮಾತುಗಳನ್ನು ಹಂಚಿಕೊಳ್ಳಲು ಸಾಕ್ಷಿಯಾದ ಮೇಳ…..
ಮೇಳದ ಎಲ್ಲಾ ಗೋಷ್ಠಿಯಲ್ಲಿ ಅನೇಕ ವೈಚಾರಿಕತೆ, ಸತ್ಯನಿಷ್ಠ ವಿಷಯಗಳು, ಯಾವುದೇ ಅಳಕಿಲ್ಲದೇ ಪ್ರತಿಪಾದಿಸಿದ ವೈಖರಿ ಎಲ್ಲವೂ ಮರೆಯಲಾಗದ ಅನುಭವದ ರಸದೌತಣ ಉಣಿಸಿದವು….
ಇನ್ನೂ ಊಟ, ಎಲ್ಲವೂ ಸಾಮರಸ್ಯದ ರುಚಿಕರದೊಂದಿಗೆ,
ಅಚ್ಚುಕಟ್ಟಾಗಿ ವಿತರಿಸಿದ ರೀತಿ ಎಲ್ಲರ ಮನಸ್ಸಿಗೆ ಹಿಡಿಸಿತು.
ಶ್ರೀ ಅಲ್ಲಮಪ್ರಭು ಬೆಟ್ಟದೂರರ ರೊಟ್ಟಿ ಮತ್ತು ಡಿ ಎಂ ಬಡಿಗೇರ ಅವರ ಚಟ್ನಿಪುಡಿ ಮರೆಯಲಾದಿತೇ ?
ಯುವಜನತೆಯ ಉತ್ಸಾಹ ಕೂಡ ಕಣ್ಣಮನ ತಂಪು ನೀಡಿತು….
ಮಾಧ್ಯಮಗಳ ನೇರ ಪ್ರಸಾರ ಹಾಗೂ ಪ್ರಜಾವಾಣಿ ಕವರೇಜ್ ಜನತೆಗೆ ತಲುಪುವಲ್ಲಿ ಯಶಸ್ವಿಯಾಯಿತು…..
ಜೊತೆಗೆ ಸಿರಾಜ್ ಬಿಸರಳ್ಳಿ ಹಾಗೂ ರಾಜಾಭಕ್ಷಿ ಮತ್ತು ಮಂಜುನಾಥ್ ಗೊಂಡಬಾಳ ಅವರ ಒಳಗೊಳ್ಳುವಿಕೆ ಇದಕ್ಕೆ ಸಾಕ್ಷಿಯಾಗಿ ನಿಂತಿತು….
ಎಲ್ಲರಿಗೂ ಗಮನ ಸೆಳೆದ ಹಿರಿಯರಾದ ಸನತಕುಮಾರ ದಂಪತಿಗಳ ಉತ್ಸಾಹ ನಮಗೆ ಸ್ಪೂರ್ತಿ ದಾಯಕವೆಂದರೆ ತಪ್ಪಾಗಲಾರದು….
ಡಾ ಹೆಚ್ ಎಲ್ ಪುಷ್ಪಾ ಅವರ ಸರಳತನ, oಜಿ ಛಿoeಡಿಛಿe ನನ್ನ ಗೆಳತಿ ಅಖಿಲಾ ಆತ್ಮಿಯತೆ ಅನನ್ಯ…
ಇಷ್ಟೆಲ್ಲಾ ಹೇಳಿದ ಮೇಲೆ ಬಸೂ ಮತ್ತು ಅನುಪಮಾ ಅವರನ್ನು ಮರೆಯಲು ಸಾಧ್ಯವೇ ?
ಮೇಳದ ರುವಾರಿಗಳಾದರೂ ಯಾವುದೇ ಹಮ್ಮು – ಬಿಮ್ಮುಗಳಿಗೆ ಒಳಪಡದೇ, ವೇದಿಕೆಯಿಂದ ಊಟದವರೆಗೂ, ಅತಿಥಿಗಳ ವಾಸವ್ಯದಿಂದ ಬಂದ ಎಲ್ಲರಿಗೂ ಅವರು ತೋರಿದ ಕಾಳಜಿ ಪ್ರೀತಿ ಮನತುಂಬಿತು… ಅನುಪಮಾ ಅವರಿಗೆ ಮೇಡಂ ಎನ್ನುವ ದೂರದಿಂದ ಅನುಪಮಾ ಅವರೇ ಎನ್ನುವ ಆತ್ಮೀಯತೆಯ ಜೊತೆಗೆ ಒಬ್ಬ ಅಕ್ಕನ ಸ್ಥಾನ ತುಂಬಿದರು, ಹಾಗೆಯೇ ಬಸೂ ಸರ್ ಅವರಿಗೆ ನಾನು ಸರ್ ಎಂದು ಕರೆಯುತ್ತಿದ್ದೆ. ಮೇಳದ ಎರಡನೆಯ ದಿನ ನನ್ನ ತಲೆಯಮೇಲೆ ಕೈಇಟ್ಟಾಗ ಒಬ್ಬ ಹಿರಿಯ ಸಹೋದರನ ಆರ್ಶಿವಾದದ ಅನುಭವ ಆಯಿತು.ಕೊನೆಗೆ ಬಸಣ್ಣ ಎಂದು ಕರೆದೆ ಬಿಟ್ಟೆ…. ?
ಅವರ ಕನಸು ಎಂಬ ಮುದ್ದಾದ ಮಗಳ ಬಗ್ಗೆ ಅವರು ಅನೇಕ ಬಾರಿ ಬರೆದದ್ದು ಓದಿದ್ದೆ.ಆ ಕನಸು ನನಸಾಗಿ ಕಣ್ಣಾರೆ ನೋಡಿದೆ.ಮುದ್ದಾದ ಮಗಳು…?
ಅಕ್ಷರಗಳಿಗೆ ಕೊನೆಯಿಲ್ಲದ ಅಕ್ಕರೆಯೊಂದಿಗೆ ಅರಿವು ನೀಡಿದ ಮೇಳವನ್ನು ನಾನು ಮರೆಯುವುದಿಲ್ಲ. ಇನ್ನೆಂದೂ ಮೇ ಸಾಹಿತ್ಯಮೇಳವನ್ನು ತಪ್ಪಿಸಿಕೊಳ್ಳುವುದಿಲ್ಲ.
ಧನ್ಯವಾದಗಳು ಶಬ್ದ ಸಣ್ಣದೆನ್ನುವೆ….
ಕೊಪ್ಪಳ ಜಿಲ್ಲೆ ಧನ್ಯತೆ ಕಂಡಿತು.
-ಶೈಲಜಾ ಹಿರೇಮಠ. ಗಂಗಾವತಿ.
೧೦ ನೇ ಮೇ ಸಾಹಿತ್ಯ ಮೇಳ ಎರಡು ದಿನಗಳ ಕಾಲ, ಕೊಪ್ಪಳದಲ್ಲಿ ಜರುಗಿರುವುದು ಸಂತಸ ತಂದಿದೆ.
ಸಂವಿಧಾನ ಭಾರತ ಧರ್ಮರಾಜಕಾರಣ ವಿಷಯದೊಳಗಿನ ಗೋಷ್ಠಿಗಳು, ವೈಚಾರಿಕ ಮಾತು, ಚರ್ಚೆ, ಪ್ರಶ್ನೋತ್ತರ, ಕವಿಗೋಷ್ಠಿಗಳು, ಪುಸ್ತಕ ಮಳಿಗೆ, ಹೀಗೆ ಎಲ್ಲೆಡೆಯೂ ಮೇ ಸಾಹಿತ್ಯ ಮೇಳ ಮನಸ್ಸು ತುಂಬಿತು.
ಬಸವರಾಜ ಹೂಗಾರ ಸರ್ ಅವರ ಪ್ರಾಸ್ತಾವಿಕ ನುಡಿ, ದಾಮೋದರ ಮೌಜೋ, ಜೂಪಕ ಸುಭದ್ರ, ರಾಕೇಶ ಟಿಕಾಯತ್, ಜಸ್ಟೀಸ್ ಗೋಪಾಲಗೌಡರ ಗಟ್ಟಿ ಮಾತುಗಳಿಂದ ಪ್ರಾರಂಭವಾದ ಮೇಳ, ಸಂವಿಧಾನ ಭಾರತ ಗೋಷ್ಠಿಯಲ್ಲಿ ಮೋಹನ ಕಾತರಕಿ, ಕೆ, ಫಣಿರಾಜ್, ವರ್ತಮಾನದಲ್ಲಿ ರಾಜಕಾರಣ ಗೋಷ್ಠಿ ಮನಸಿಗೆ ಹಿಡಿಸಿತು. ಜನಾರ್ಧನ ಜನ್ನಿ, ಡಿಂಗ್ರಿ ಭರತ್, ರಮೇಶ ಗಬ್ಬೂರ ಅವರ ಹೋರಾಟದ ಹಾಡುಗಳು ಎರಡು ದಿನ ಶಿವಶಾಂತವೀರ ಭವನದಲ್ಲಿ ಎಷ್ಟೊಂದು ಕ್ರಾಂತಿಗೀತೆಗಳು.
ಪಿ.ಎನ್.ಗೋಪಿಕೃಷ್ಣ ಅವರ ಆಶಯದ ಮಾತು, ಎಚ್.ಎಲ್.ಪುಷ್ಪಾ ಅವರ ಅಧ್ಯಕ್ಷೀಯ ನುಡಿ, ಕೆ.ನೀಲಾ, ಅಪ್ಪಗೆರೆ ಸೋಮಶೇಖರ, ಅವಿಜಿತ್ ಘೋಷ್ ಎಓU, ಡಾ.ರವಿಕುಮಾರ ಬಾಗಿ ಗೋಷ್ಠಿಯಲ್ಲಿನ ಮಾತುಗಳು
ನಾವು ಮತ್ತು ನಾಳೆ ಗೋಷ್ಟಿಯಲ್ಲಿ ಶಿವಸುಂದರ ಅವರ ಮಾತುಗಳು ನಮ್ಮ ಅರಿವು ಹೆಚ್ಚಿಸಿದವು
ಸುನಂದಮ್ಮ ಮೇಡಂ, ರೆಹಮತ್ ತರೀಕೆರೆ ಸರ್, ಡಾ.ಹೆಚ್.ಎಸ್.ಅನುಪಮಾ, ಬಸವರಾಜ ಶೀಲವಂತರ , ಡಿ.ಹೆಚ್.ಪೂಜಾರ, ಕೆ. ಬಿ. ಗೋನಾಳ, ಸಿರಾಜ್ ಬಿಸರಳ್ಳಿ, ಶರಣಪ್ಪ ಬಾಚಲಾಪುರ, ಯುವ ಮಿತ್ರರಾದ, ನಿಂಗು, ಸಾಹೇಬ್, ಕಾಶಪ್ಪ, ಮಹೇಶ ಬಳ್ಳಾರಿ, ಮಹೆಬೂಬ ಮಠದ, ರಮೇಶ ಬನ್ನಿಕೊಪ್ಪ, ಮಹೆಬೂಬ ಕಿಲ್ಲೇದಾರ, ಲಕ್ಷ್ಮಣ ಪೀರಗಾರ, ಶರಣು ಶೆಟ್ಟರ, ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಎಷ್ಟೊಂದು ಓಡಾಟ ಎಷ್ಟೊಂದು ಕೆಲಸ. ಸಣ್ಣ ವ್ಯತ್ಯಾಸ ಕೂಡ ಆಗದ ಹಾಗೆ
ಅವರಿವರೆನ್ನದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮೇ ಸಾಹಿತ್ಯ ಮೇಳ ಯಶಸ್ವಿಯಾಗಲು ಸಹಕರಿಸಿದ ಸರ್ವರಿಗೂ ವಂದನೆಗಳು
ನಮ್ಮೆಲ್ಲರಿಗೂ ದಾರಿದೀಪದಂತೆ ನಿಂತು ಮಾರ್ಗದರ್ಶನ ಮಾಡಿದ ಎಲ್ಲ ಮನಸುಗಳಿಗೂ ಜೈ ಭೀಮ ನಮನಗಳು.
ಇದು ನಮ್ಮ ಮೇ ಸಾಹಿತ್ಯ ಮೇಳ
– ನಾಗರಾಜ ನಾಯಕ ಡೊಳ್ಳಿನ
ಇಸ್ರೋ ದಲ್ಲಿ ಉದ್ಯೋಗಿಯಾಗಿರುವ ಬಿ. ಕೆ. ಮಂಜುಳಾದೇವಿ ಅವರು ೧೦ನೇ ಮೇ ಸಾಹಿತ್ಯ ಮೇಳದಲ್ಲಿ ಪಾಲ್ಗೊಂಡಿದ್ದರು. ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಮೇ ಸಾಹಿತ್ಯ ಮೇಳ ವೈಚಾರಿಕತೆ, ಸಾಹಿತ್ಯ ಇವುಗಳನ್ನು ಹೊರತು ಪಡಿಸಿ ಹಲವು ರೀತಿಯಲ್ಲಿ ಸಂಬಂಧವನ್ನು ಬೆಸೆಯುವ ಕೆಲಸವನ್ನೂ ಮಾಡುತ್ತಿದೆ.
ನಾನು ಕೇವಲ ಎರಡೇ ಸಾಹಿತ್ಯ ಮೇಳದಲ್ಲಿ ಪಾಲ್ಗೊಂಡರೂ ಕೂಡ ಅನೇಕರು ನನಗೆ ಆತ್ಮೀಯರಾದರು.
ಜಂಬವ್ವ ದುರ್ಗವ್ವರನ್ನು ನಾನು ತಬ್ಬಿ ಮಾತನಾಡಿಸಿದಾಗ ಅವರ ಕಣ್ಣಲ್ಲಿ ಕಂಡ ಆನಂದ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಭಾವವನ್ನು ಕಣ್ಣಲ್ಲಿ ಮನದಲ್ಲಿ ಸೆರೆಹಿಡಿದು ತಂದಿರುವೆ.
ಇನ್ನೆರಡು ಜೀವಗಳ ಬಗ್ಗೆ ನಾನಿಲ್ಲಿ ಹೇಳಲೇ ಬೇಕು ಸರಸ್ವತಿ ಮತ್ತು ಕಿರಣ್ ಎಂಬ ಎರಡು ಯುವ ಜೀವಗಳು ನನ್ನನ್ನು ಅಮ್ಮ ಅಮ್ಮ ಅಂತಾ ಕರೆಯುತ್ತಾ ಇದ್ದರೆ ನಾನೆಲ್ಲೋ ತೇಲಿ ಹೋಗಿಬಿಟ್ಟೆ.
ಇಂತಹ ಪ್ರೀತಿಯೇ ಅಲ್ಲವೇ ಮನುಷ್ಯರನ್ನು ಬೆಸೆಯುವುದು.
ಇನ್ನು ವಸತಿಯಲ್ಲಿ ನನ್ನ ಜೊತೆಯಾದ ಜಹಾನ್ ಆರಾ ಕೋಳೂರು ಅವರು ಬಹುಮುಖ ಪ್ರತಿಭೆಯ ಪ್ರಜ್ಞಾವಂತ ಶಿಕ್ಷಕಿ ಎಂಬುದು ಆವರ ಮಾತುಗಳಲ್ಲಿಯೇ ತಿಳಿಯಿತು .ಕೇವಲ ಪಠ್ಯ ವನ್ನ ಭೋದಿಸುವ ಕೆಲಸ ಮಾಡದೆ ಮಕ್ಕಳ ಸುಪ್ತ ಪ್ರತಿಭೆಯನ್ನ ಹೆಕ್ಕಿ ತೆಗೆಯುವ ಅವರ ಕೆಲಸ ಶ್ಲಾಘನೀಯ.
ಮೇ ಸಾಹಿತ್ಯ ಮೇಳದ ಸಾರವನ್ನೆಲ್ಲಾ ಎದೆಗಿಳಿಸಿಕೊಂಡು ಬಂದಿರುವೆ. ನಿಜವಾಗಲೂ ಅರ್ಥಪೂರ್ಣ ಕಾರ್ಯಕ್ರಮ ಸಾಹಿತ್ಯ ಮೇಳದ ಎಲ್ಲಾ ಸಂಗತಿಗಳಿಗೂ, ವಿಶೇಷವಾಗಿ ಎಲ್ಲಾ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿದ ಜೀವಗಳಿಗೆ ಶರಣು ಶರಣು ಶರಣು.
ಅಂದಹಾಗೆ
ಕೊನೆ ಮಾತು ಇಲ್ಲಿ ಹೇಳಲೇಬೇಕು;
ಸಾಹಿತ್ಯ ಮೇಳದ ವಿಶೇಷ ದ ಬಗ್ಗೆ ನನ್ನ ಸಹೋದ್ಯೋಗಿಗಳಿಗೆ, ಸ್ನೇಹ ವರ್ಗಕ್ಕೆ ತಿಳಿಸಿರುವೆ. ಮುಂದಿನ ವರ್ಷ ತಾವು ಬರುವುದಾಗಿ ಹಲವರು ತಿಳಿಸಿದ್ದಾರೆ.
-ಬಿ. ಕೆ. ಮಂಜುಳಾದೇವಿ ಬೆಂಗಳೂರ
ಹಿರಿಯರಾದ ಚಾಮರಾಜನಗರದ ಕೆ. ವೆಂಕಟರಾಜು ಅವರಿಂದ ಮೇ ಸಾಹಿತ್ಯ ಮೇಳದ ಕುರಿತ ಅಭಿಪ್ರಾಯ
ಮೇ ಸಾಹಿತ್ಯ ಮೇಳ ಯಶಸ್ವಿಯಾಗಿ ಮುಗಿದಿದೆ. ಇದನ್ನು ಆಗು ಮಾಡಿಸಿದವರಿಗೆಲ್ಲಾ ಧನ್ಯವಾದಗಳು. ಧನ್ಯವಾದಗಳು ಎಂದು ಮಾತ್ರ ಹೇಳಲು ಸಾಧ್ಯ.
ಕೆ. ಫಣಿರಾಜ್ , ದಾಮೋದರ್ ಮೌಜೋ , ಸುಭದ್ರಾ, ಕೊಪ್ಪದ ವಕೀಲರಾದ ಸುಧೀರ್ ಕುಮಾರ, ಕವಿಗೋಷ್ಟಿಯ ಕವನಗಳು , ಜನ್ನಿಯವರ ಹಾಡು , ಇನ್ನೂ ಕಿವಿಯಲ್ಲಿದೆ. ಶಿವಸುಂದರ್ ಅವರ ವಿಶ್ಲೇಷಣೆ ಕೇಳಲು ಸಾಧ್ಯವಾಗಲಿಲ್ಲ. ನಮ್ಮ ಊರಿನ ನಮಗೆ ಪರಿಚಯ ಇಲ್ಲದ ಕವಯತ್ರಿ ದೀಪಾ ಬುದ್ದೆ ಅವರು ಕವಿತೆ ಓದಿದ್ದು ಹೆಮ್ಮೆ ಎನಿಸಿತು. ಅವರನ್ನು ತಪ್ಪದೇ ಸ್ಥಳಿಯ ಕಾರ್ಯಕ್ರಮಗಳಿಗೆ ಸೇರಿಸಿಕೊಳ್ಳಬೇಕು.
ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬಹುಶಃ ಕಳೆದ ಶತಮಾನದ ಮೂರನೆಯ ದಶಕದಲ್ಲಿ ಪ್ರಗತಿಶೀಲ ಚಳವಳಿ ಆರಂಭವಾಯಿತು. ಬಹುಶಃ ಮುಂಶಿ ಪ್ರೇಮಚಂದ್ ಸಮ್ಮೇಳನದ ಅಧ್ಯಕ್ಷರು. ಇಂತಹ ಒಂದು ಸಮ್ಮೇಳನಕ್ಜೆ ಅನಕೃ ಭಾಗವಹಿಸಿದ್ದರು. ಅದರ ನೆರಳಲ್ಲೇ ಇಪ್ಟಾ ಜನ್ಮ ತಳೆಯಿತು. ಎಷ್ಡೊಂದು ಜನ ಕವಿಗಳು ಹೊರ ಬಂದರು. ಭಾರತದಾದ್ಯಂತ ಇದರ ಪ್ರಭಾವ ಇತ್ತು. ಇನ್ಮೂ ಸಾಹಿತ್ಯ ರಂಗಭೂಮಿ ಮತ್ತು ಸಿನೆಮಾದಲ್ಲಿ ಅದರ ಸಾಹಿತ್ಯದಲ್ಲಿ ಪ್ರಗತಿ ಶೀಲ ಚಳವಳಿಯ ಪ್ರಭಾವ ಇದೆ. ಒಂದು ಕಡೆ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಹೋರಾಟ , ಮತ್ತೊಂದು ಕಡೆ ಸಮಾನತೆಯ ಹೊಸ ಜಗತ್ತಿನ ನಿರ್ಮಾಣಕ್ಕೆ ತಹತಹ.
ಗಾಂಧಿ, ಜವಹರಲಾಲ್ , ಬೋಸ್ , ಜೆಪಿ ಲೋಹಿಯಾ ಅರುಣಾ, ಅಸಫ್ ಆಲಿ ,ಯೂಸೂಫ್ ಮೆಹರಲಿ ಇವರೆಲ್ಲಾ ಕಾಮ್ರೇಡರೇ !
ಕನ್ನಡದಲ್ಲಿಯೂ ಪ್ರಗತಿಶೀಲ ಚಳವಳಿ ತನ್ನ ಪ್ರಭಾವ ಬೀರಿತು. ಅನಕೃ , ತರಾಸು ಕಟ್ಟೀಮನಿ ನಿರಂಜನ ಎಂದೂ ಆಡಳಿತ ಮತ್ತು ಪ್ರಭುತ್ವದ ಜೀತದಾಳುಗಳಾಗಲೇ ಇಲ್ಲ. ರಕ್ಷಾಪುಟ ಮಾತ್ರ ಬಣ್ಣದಲ್ಲಿದ್ದ ನ್ಯೂಸ್ ಪ್ರಿಂಟ್ ಕಾಗದದಲ್ಲಿ ಮುದ್ರಿತವಾದ ಕಾದಂಬರಿಗಳು ಕನ್ನಡ ನಾಡಿನ ಯುವಕ ಯುವತಿಯರ ಗೃಹಿಣಿಯರ ಕೈಗಳಲ್ಲಿ ಕಂಗೊಳಿಸಿದುವು. ಯಾವ ಚಳವಳಿಯಲ್ಲಿ ಎಲ್ಲ ಕೃತಿಗಳೂ ಶಾಶ್ವತವಾಗಿ ಉಳಿಯದಾದರೂ ಈಗಟಿ.ವಿ ಧಾರಾವಾಹಿಗಳ ಆಘಾತ ತಡೆದು ಆ ಪರಂಪರೆಯಲ್ಲಿಯ ಕೆಲವು ಕೃತಿಯನ್ಮು ಬಿಟ್ಟು ಮಾತನಾಡಲಾಗುವುದಿಲ್ಲ
ಕುವೆಂಪು ,ಕಾರಂತ , ಬೇಂದ್ರೆ ಮಾಸ್ತಿ, ಅಡಿಗ , ದೇವನೂರ ಮಹಾದೇವ ಸಿದ್ದಲಿಂಗಯ್ಯ ಬೇರೆಯಾಗಿಯೇ ನಿಲ್ಲುವ ಎತ್ತರದ ವ್ಯಕ್ತಿಗಳು. ಭಾಷೆಗೆ ಮರ್ಯಾದೆ ತಂದವರು
ಈ ನಡುವೆ ದಲಿತ ಮತ್ತು ಬಂಡಾಯ ಚಳವಳಿ ಹೊಸ ಸಂವೇದನೆ ಮೂಡಿಸಿದುವು.
ಮೇ ಸಾಹಿತ್ಯ ಮೇಳ ಈ ಜನಪರವಾದ ಚಳವಳಿ , ಸಾಹಿತ್ಯದ ಮುಂದುವರಿಕೆ ಎಂದು ನಾನು ಭಾವಿಸುತ್ತೇನೆ. ಸಂವಿಧಾನದ, ಪ್ರಜಾತಂತ್ರದ ಉಳವಿಗೆ ಕವಿ, ಬರಹಗಾರ, ಕಲಾವಿದ ಏನು ಮಾಡಬೇಕು ಎಂಬುದನ್ನು ನೆನಪಿಸುವ ಚೈತನ್ಯ ನೀಡುವ ಸಮ್ಮೇಳನ ಇದು.
ಯಾವ ಯಾವದಕ್ಕೋ ಸರಕಾರ ಹಣಕೊಡುತ್ತದೆ ನಮಗೂ ಕೆಲವು ಕೋಟಿ ಕೊಟ್ಟರೆ ತಪ್ಪೇನು ಎಂಬ ವಿತ್ತಂಡವಾದಕ್ಕೆ ಶರಣಾಗದೇ ಜನಗಳಿಂದ ಹಣ ಸಂಗ್ರಹ ಮಾಡಿ ಯಶಸ್ವಿಯಾಗಿ ನಿರ್ವಹಿಸಿ ಹಾಗೆಯೇ ಲೆಕ್ಕ ಕೊಟ್ಟು ಕೈ ಜಾಡಿಸಿ ಕೊಳ್ಳುವ ಚಟುವಟಿಕೆ.
ಈ ಎಲ್ಲ ಚಟುವಟಿಕೆಗೆ ಕಿವಿಯಾದವರು ಸಾವಿರದ ಜನ. ಗೋಷ್ಠಿಗಳ ಕೊನೆಯ ತನಕ ಸಭಾಂಗಣ ಭರತಿಯಾಗಿದ್ದು ವಿಶೇಷ.
ಹೊಸ ಚಿಗುರು ಮತ್ತು ಹಳೆ ಬೇರುಗಳು ಪರಸ್ಪರ ಮಾತನಾಡಿಕೊಂಡು ಹರಟುತ್ತಿದ್ದುದು ಮುದಗೊಳಿಸಿದುವು.
-ಕೆ. ವೆಂಕಟರಾಜು, ಚಾಮರಾಜನಗರ
ಮೇ ಸಾಹಿತ್ಯ ಮೇಳದುದ್ದಕ್ಕೂ ಕ್ರಾಂತಿ ಹಕ್ಕಿಗಳ ಕಲರವ. ಕೊಪ್ಪಳದಲ್ಲಿ ನಡೆದ ಎರಡು ದಿನದ ಮೇ ಸಾಹಿತ್ಯ ಮೇಳದಲ್ಲಿ ಕರ್ನಾಟಕದ ನಾನಾ ಕಡೆಗಳಿಂದ ಹಾರಿಬಂದ ಬದಲಾವಣೆ ಬಯಸುವ ಕ್ರಾಂತಿ ಹಕ್ಕಿಗಳು ಒಂದಡೆ ಸೇರಿ ಹಾಡಿದ ಕ್ರಾಂತಿ ಗೀತೆ ಬರಿ ಕೊಪ್ಪಳ ಜಿಲ್ಲೆಯಲ್ಲಿ ಅಲ್ಲ ಇಡಿ ದೇಶದಲ್ಲಿಯೇ ಸಂಚಲ ಮೂಡಿಸಿತು.
ವಿಭಿನ್ನ ವಿಚಾರಧಾರೆ ಸಾವಿರಾರು ಜನಗಳು, ಪ್ರಶ್ನಿಸುವುದನ್ನೆ ಮರೆತಿದ್ದವರಲ್ಲಿ ಪ್ರಶ್ನಿಸುವಂತಹ ಚೈತನ್ಯ ತುಂಬಿ ಪ್ರಭುತ್ವವನ್ನು ಪ್ರಶ್ನಿಸುವಂಥ ಆತ್ಮಸ್ಥೈರ್ಯ ತುಂಬಿತು ಈ ಮೇಳ.
ಮೇಳದ ಉಧ್ಘಾಟನೆಯೇ ಕ್ರಾಂತಿಕಾರಕ. ಬದಲಾವಣೆ ಧಾರೆಯ ವಿಚಾರಗಳನ್ನು ಹಚ್ಚಿ ಪ್ರಭುತ್ವದ ಮತ್ತು ಬಂಡವಾಳಶಾಹಿಗಳ ದೌರ್ಜನ್ಯಕ್ಕೆ ಇಂದು ನಾವು ಎದೆ ಒಡ್ಡದಿದ್ದರೆ ಮುಂದೊಂದು ದಿನ ಗುಲಾಮರಾಗುವ ದಿನಗಳು ದೂರವಿಲ್ಲ ಎನ್ನುತ್ತಾ , ಜೈಲುಗಳು ಪೋಲಿಸ ಲಾಟಿ ಬೂಟ್ ಗಳು ನಮಗೇನೂ ಹೊಸತಲ್ಲ . ಜೈಲು ,ಲಾಟಿ ಬೂಟ್ ಗಳ ನೋಡಿಯೆ ಸ್ವಾತಂತ್ರ್ಯ ಪಡೆದವರಿಗೆ ಇವುಗಳು ಗೊಡ್ಡು ಬೆದರಿಕೆ ಯಾವ ಲೆಕ್ಕ ಎನ್ನುತ್ತಾ ಉಧ್ಘಾಟನೆಯಲ್ಲಿ ಕ್ರಾಂತಿಯ ಕಹಳೆ ಮೊಳಗಿಸಿದ ಮೇಳ ಇದಾಗಿತ್ತು.
ಪ್ರಭುತ್ವಶಾಹಿ , ಬಂಡವಾಳಶಾಹಿ ಮತ್ತು ಅಧಿಕಾರಿಶಾಹಿಗಳ ಕುತಂತ್ರದಿಂದ ಜನಸಾಮಾನ್ಯನ ಇಂದಿನ ಪರಿಸ್ಥಿತಿ ಏನಾಗಿದೆ ಎನ್ನುವುದು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಬಂದ ಗೋಷ್ಠಿಗಳು. ಇಂತಹ ಪರಿಸ್ಥಿತಿಯಲ್ಲಿ , ಜನಸಾಮಾನ್ಯನ ಮುಂದಿರುವ ಪ್ರಶ್ನೆಗಳೇನು? ಮತ್ತು ಪರಿಹಾರವೇನು ? ಎನ್ನುವುದು ಸಹ ಅತ್ಯಂತ ಸ್ಷಷ್ಟವಾಗಿ ಚರ್ಚೆಗೆ ಬಂತು ಸಭೆಯಲ್ಲಿ.
ಇಂದು ಬಹುತೇಕರು ಕಂಫರ್ಟ್ ಝೋನ್ನಲ್ಲಿ ಇರುವುದರಿಂದ ಈ ವ್ಯವಸ್ಥೆಯನ್ನು ಪ್ರಶ್ನಿಸಲಾಗದೆ ಎಲ್ಲದ್ದಕ್ಕೂ ತಲೆ ಅಲ್ಲಾಡಿಸುವ ಸ್ಥಿತಿ ಬಂದಿದೆ . ನಾವು ಪ್ರಶ್ನಿಸಬೇಕು , ನಾವು ಪ್ರತಿರೋಧಿಸಬೇಕು ಅವಾಗ ಮಾತ್ರ ನಮ್ಮ ಕೂಗು ಪ್ರಭುತ್ವಶಾಹಿ ಕೇಳುತ್ತದೆ. ಅದಕ್ಕೆಲ್ಲಾ ನಾವು ಸನ್ನದ್ದರಾಗಬೇಕಾದ ಈ ತುರ್ತು ಕಾಲಘಟ್ಟದಲ್ಲಿ ನಾವೆಲ್ಲರೂ ಒಂದಾಗಬೇಕೆಂಬ ಕೂಗು ಇಡೀ ಮೇಳದ್ದು ಆಗಿತ್ತು.
ಬರೀ ಕ್ರಾಂತಿಯ ಮಾತಾಗದೆ , ಎಲ್ಲರನ್ನು ಒಳಗೊಂಡು ಇವ ನಮ್ಮವ ಎನ್ನುವ ಪ್ರೀತಿಯ ಗಾಳಿಯು ಬೀಸುತ್ತಿತ್ತು. ಗಡಿಗಳನ್ನು ಮೀರಿದ ಪ್ರೀತಿ ಅಲ್ಲಿ ಕಾಣುತ್ತಿತ್ತು. ಬದಲಾವಣೆಯಲ್ಲಿ ಖಂಡಿತ ನೋವು ಇದೆ , ಆದರೆ ಆ ಬದಲಾವಣೆ ಇಲ್ಲಿಂದಲೇ , ನಮ್ಮಿಂದಲೇ ಆಗಬೇಕು ಎನ್ನುವ ಬದಲಾವಣೆ ಸ್ಪಷ್ಟ ಕೂಗು ಅಲ್ಲಿತ್ತು.
ಒಟ್ಟಿನಲ್ಲಿ ಸದ್ಯದ ತಲ್ಲಣಗಳು, ಭಯಾನಕ ಭವಿಷ್ಯದ ಚಿಂತನೆಗಳು , ಅವುಗಳನ್ನು ಪ್ರತಿರೋಧಿಸುವ ಮತ್ತು ಪರಿಹಾರ ಕಂಡುಕೊಳ್ಳಲು ಕ್ರಾಂತಿಕಾರಿ ಹೆಜ್ಜೆಗಳು ಚಿಂತನೆಗಳು ಎರಡು ದಿನ ಕೊಪ್ಪಳದ ತುಂಬೆಲ್ಲಾ ಹರಿದಾಡಿದವು. ಕೊಪ್ಪಳದಲ್ಲಿನ ಈ ಕ್ರಾಂತಿಕಾರಿ ಹಕ್ಕಿಗಳ ಕೂಗು ಮತ್ತು ಹಾಡು ಇಡಿ ಭಾರತದ ಮೂಲೆ ಮೂಲೆಗಳಿಗೂ ಮುಟ್ಟುವಂತೆ ಮಾಡಿತು ಈ ಮೇ ಸಾಹಿತ್ಯ ಮೇಳ. ಒಟ್ಟಿನಲ್ಲಿ ಈ ಮೇಳದಲ್ಲಿ ಮನಸ್ಸು ಕಟ್ಟುವ , ನಾಡ ಕಟ್ಟುವ , ಸಂಸ್ಕ್ರತಿ ಕಟ್ಟುವ , ಸಮಸಮಾಜದ ಆಸೆ ಹೊತ್ತು ಬಂದ ಹಕ್ಕಿಗಳು ಮತ್ತೊಮ್ಮೆ ಭರವಸೆ ಮೂಡಿಸಿ ನಿನ್ನೆ ಮತ್ತೆ ತಮ್ಮ ತಮ್ಮ ಗೂಡುಗಳ ಕಡೆ ಹಾರಿದವು..
ಡಾ. ರಾಜಶೇಖರ ನಾರನಾಳ
ವೈದ್ಯರು ಗಂಗಾವತಿ.
ನನಗೆ ಕೊಪ್ಪಳಕ್ಕೆ ಬರಲು ಆಗಲಿಲ್ಲ. ಎರಡೂ ದಿನದ ಎಲ್ಲಾ ಕಾರ್ಯಕ್ರಮಗಳನ್ನು ಯೂಟ್ಯೂಬ್ ನಲ್ಲಿ ನೋಡಿದೆ. ಮೇ ಸಾಹಿತ್ಯ ಮೇಳಕ್ಕೆ ಬರಲಾಗದಿದ್ದುದಕ್ಕೂ ಇರಬಹುದು. ಒಂದು ಹಾಡು ಬರೆದೆ. ಟ್ಯೂನ್ ಹಾಕಿ ಆರ್ಸಿಎಫ್ ಗೆಳೆಯರಿಗೆ ಕಳಿಸಿದ್ದೆ. ಅವರು ಹಾಡಿದರು.
-ಡಾ. ಬಿ.ಎಂ. ಪುಟ್ಟಯ್ಯ
ಹಂಪಿ ಕನ್ನಡ ವಿಶ್ವವಿದ್ಯಾಲಯ
೧೦ನೇ ಮೇ ಸಾಹಿತ್ಯ ಮೇಳ: ಕೆಲವು ಅಭಿಪ್ರಾಯಗಳು-೧
ಎಲ್ಲ ಹೊಸ ಮುಖಗಳೇ ಜಾಸ್ತಿ ಸಂಖ್ಯೆಯಲ್ಲಿ ಇದ್ದವು.
ಹೊಸನೀರು ಹೊಸಪೀಳಿಗೆ ತುಂಬಾ
ಯುವಕ ಯುವತಿಯರು,
ವಿದ್ಯಾರ್ಥಿ ವಿದ್ಯಾರ್ಥಿನಿಯರು,
ಸಾಹಿತ್ಯಕ್ಕೆ ಹೊಸದಾಗಿ ಪ್ರವೇಶಿಸಿದ ಸಾಹಿತ್ಯಾಸಕ್ತರು.
ಇದೇ ಈ ಸರ್ತಿಯ ಮೇ ಸಾಹಿತ್ಯ ಮೇಳದ ವಿಶೇಷತೆ
ಮತ್ತು ಯಶಸ್ವಿ.
-ಪ್ರಕಾಶ ಖೋನಾಪುರ ಶಿಕಾರಿಪುರ
*
ಮೇ ಮೇಳ ಯಶಸ್ವಿಯಾಗಿ ನಡೆಯಿತು. ಈ ಹಿಂದೆ ನನಗೆ ಎಷ್ಟು ಬಾರಿ ಪ್ರಯತ್ನ ಮಾಡಿದರೂ ಮೇಳದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.
ವೈಚಾರಿಕವಾಗಿ, ಸಾಹಿತ್ಯಕವಾಗಿ ನೀವುಗಳು ಆಯ್ಕೆ ಮಾಡಿದ ಪಟ್ಟಿ ತುಂಬಾ ಚೆನ್ನಾಗಿತ್ತು. ಮುಖ್ಯವಾಗಿ ಯುವ ಜನಾಂಗವನ್ನು ನೀವು ಬಳಸಿಕೊಂಡಿರುವುದು ಮೆಚ್ಚುಗೆಯ ಸಂಗತಿ. ಕವಿಗೋಷ್ಟಿಯ ಕವಿಗಳ ಆಯ್ಕೆ ನಿಜವಾಗಲೂ ಖುಷಿ ತಂದಿತು. ಬಹಳಷ್ಟು ಹೊಸ ಕವಿಗಳನ್ನು ನೋಡುವ ಅವಕಾಶವೂ ದೊರೆಯಿತು.
ನನಗೂ ಸಹ ಅವರೊಂದಿಗೆ ಬೆರೆಯುವ ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ನಿಮ್ಮ ಪ್ರಯತ್ನಗಳು ಹೀಗೆಯೇ ಯಶಸ್ಸನ್ನು ಕಾಣಲಿ.
– ಪುಷ್ಪ. ಎಚ್.ಎಲ್ ಬೆಂಗಳೂರ
*
ಶಿವಸುಂದರ್ ಅವರ ಚಿಂತನ ಪ್ರಚೋದಕವಾದ ಸಮಾರೋಪ ಭಾಷಣ ಕೇಳಿಕೊಂಡು ನಾನು ಬಾನು ಮೇಸಾಹಿತ್ಯ ಸಮ್ಮೇಳನ ವಾಪಾಸಾದೆವು. ಎಷ್ಟೊಂದು ಕವನಗಳ ವಾಚನ, ಪುಸ್ತಕ ವಿನಿಮಯ, ಹರಟೆ, ಉಪನ್ಯಾಸ. ಹಳೆ-ಹೊಸ ಗೆಳೆಯರ ಭೆಟ್ಟಿ. ಎರಡು ದಿನ ಸಾರ್ಥಕವೆನಿಸಿದವು.
ಸಮ್ಮೇಳನದಲ್ಲಿ ಗಮನಸೆಳೆವ ಹಲವು ಸಂಗತಿಗಳಿದ್ದವು. ಅವುಗಳಲ್ಲಿ ಸಭಾಂಗಣದ ಪ್ರವೇಶ ದ್ವಾರದಲ್ಲಿ ನಿಲ್ಲಿಸಿದ್ದ ಮುಂಡರಗಿ ಹುತಾತ್ಮರ ಫಲಕವೂ ಒಂದು. ಆ ಪಟ್ಟಿಯನ್ನೊಮ್ಮೆ ಗಮನಿಸಿ. ದೇಶದ ಬಿಡುಗಡೆಯಲ್ಲಿ ಸಾಮಾನ್ಯ ಜನ ಹೇಗೆ ಜೀವತೆತ್ತರು ಎಂಬ ಚರಿತ್ರೆಯ ತುಣುಕದು.
-ರಹಮತ್ ತರೀಕೆರೆ ಹೊಸಪೇಟೆ
*
ಈ ಹತ್ತು ವರ್ಷಗಳಲ್ಲಿ ೧೦ನೇ “ಮೇ ಸಾಹಿತ್ಯ ಮೇಳ” ಬಹಳ ಸುಂದರವಾಗಿ ಕಾರ್ಯಕ್ರಮ ಆಯ್ತು. ತುಂಬ ಅತ್ಯದ್ಬುತವಾಗಿ ನಡೆಯಿತು ನಾ ಒಂದೇ ಒಂದು ಸಲನೂ ಈ ಸಾಹಿತ್ಯ ಮೇಳ ತಪ್ಪಿಸಿಕೊಂಡಿಲ್ಲ ಎರಡು ಬಾರಿ ಬಿಟ್ರೆ ಅದು ಎಲ್ಲಿ ಕಾರ್ಯಕ್ರಮ ನಡೆಸಿದಿರೋ ಗೊತ್ತಿಲ್ಲ (೨೦೨೦-೨೦೨೨ರಲ್ಲಿ ಮೇ ಸಾಹಿತ್ಯ ಮೇಳ” ಬಹಿರಂಗ ವೇದಿಕೆಯಲ್ಲಿ ನಡೆಯಲಿಲ್ಲ ಕಾರಣ ಕೊರೋನ ಲಾಕ್ಡೌನ್ದಿಂದ ಆನ್ಲೈನ್ಲ್ಲಿ ನಡೆಯಿತು). ಕೊಪ್ಪಳ ಬಿಸಿಲ ತಾಪ ಈ ಸಾರಿ ಮಳೆ ಆಗಿದ್ದರಿಂದ ಕಡಿಮೆ ಇತ್ತು. ಬಿಸಿಲಿದ್ದರೂ ಇಂತ ಪ್ರಗತಿಪರ, ವೈಚಾರಿಕ ಸಾಹಿತ್ಯ ಮೇಳ ತಪ್ಪಿಸಿಕೊಳ್ಳುವುದಿಲ್ಲ
“ಮೇ ಸಾಹಿತ್ಯ ಬಳಗ” ತುಂಬ ಶ್ರಮವಹಿಸಿ ಕಾರ್ಯಕ್ರಮ ಕೆಲಸ ಮಾಡ್ತಿದೆ. ಬಳಗಕ್ಕೆ ಅಭಿನಂದನೆಗಳು.
ಇಲ್ಲಿಯವರೆಗೂ ಉತ್ತರ ಕರ್ನಾಟಕದ ಕಡೆಯಲೆಲ್ಲ ಮೇಳ ಮಾಡಿದ್ದಿರಿ. ದಕ್ಷಿಣ ಕರ್ನಾಟಕದ ಭಾಗದಲ್ಲೂ ಈ “ಮೇ ಸಾಹಿತ್ಯ ಸಮ್ಮೇಳ” ಕಾರ್ಯಕ್ರಮ ನಡೆಸಬೇಕು. ಮುಂದಿನ ಬಾರಿ ನಮ್ಮ ಚಿಕ್ಕಬಳ್ಳಾಪುರದಲ್ಲಿ ನಡೆಸೋಣ. ಇದರ ಬಗ್ಗೆ ನಾನೂ ಕೂಡ ಸಮಮನಸ್ಕರ ಜೊತೆ ಚರ್ಚಿಸಿ ಹೇಳುತ್ತೇನೆ ಮತ್ತು ನಿಮ್ಮ ಜೊತೆ ಮಾತಾಡುವೆ.
-ಕೃಷ್ಣ ಪ್ರಸಾದ
ಮೇ ಸಾಹಿತ್ಯ ಸಮ್ಮೇಳನ ವರ್ಷದಿಂದ ವರ್ಷಕ್ಕೆ ಅತಿ ಹೆಚ್ಚು ಜನಪ್ರಿಯವಾಗುತ್ತಿದೆ ಎನ್ನುವುದಕ್ಕಿಂತ ಶೋಷಿತರ ಪರ ನಿಲ್ಲುತ್ತಿದೆ, ಈ ದುರಿತ ಕಾಲದಲ್ಲಿ ಜನತೆಯ ದನಿಯಾಗಿ ಜನವಿರೋಧಿ ವ್ಯವಸ್ಥೆಯ ವಿರುದ್ಧ ನಿಂತು ಧಿಕ್ಕಾರ ಹೇಳಬೇಕಿದೆ ಸರ್ವಾಧಿಕಾರಿಗಳ ವಿರುದ್ಧ.
ಮೇ ಮೇಳ ಸಂವಿಧಾನದ ಪರ ಪ್ರಜಾಪ್ರಭುತ್ವದ ಪರ, ನಾಡಿನ ಎಲ್ಲಾ ಶೋಷಿತರ ಧ್ವನಿಯಾಗುತ್ತಿದೆ ಎನ್ವುವುದರಲ್ಲಿ ಎರಡು ಮಾತಿಲ್ಲ.
ಈ ಸಲ ಕೊಪ್ಪಳದ ೧೦ನೇ “ಮೇ ಸಾಹಿತ್ಯ ಸಮ್ಮೇಳನ” ಇಷ್ಟೊಂದು ಯಶಸ್ವಿಯಾಗಲು ಮುಖ್ಯವಾಗಿ ಅದು ಯುವ ಮನಸುಗಳ ಧ್ವನಿಯಾಗಿದ್ದೇ ಕಾರಣ.
ಸದೃಢ ಸಮಾಜ ಕಟ್ಟಲು ಕನಸು ಕಾಣುವ ಕನಸುಗಾರ ಸಂಗಾತಿಗಳಿಗೆ ಮೆಚ್ಚುಗೆಗೆ ಕಾರಣವಾಗಿದ್ದರೆ ಅದು ಕೊಪ್ಪಳ ಮೇ ಸಾಹಿತ್ಯ ಮೇಳಕ್ಕಾಗಿ ದುಡಿದ ಪ್ರಗತಿಪರ ಮತ್ತು ವೈಚಾರಿಕ ಚಿಂತನೆಯ ಎಲ್ಲ ಮನಸುಗಳು ಕಾರಣ. ಆ ಮನಸುಗಳಿಗೆ ಹೃದಯ ತುಂಬಿದ ಧನ್ಯವಾದಗಳು..
-ಕೇಶವ ಕಟ್ಟಿಮನಿ ಬಾಲೇಹೊಸೂರ ರೈತ
*
ಚೈತನ್ಯದ ಬೀಜ ಕೇವಲ ಕೊಪ್ಪಳದಲ್ಲಿ ಮಾತ್ರವಲ್ಲ, ಕರ್ನಾಟಕದ ಅನೇಕ ಕಡೆ ಬಿತ್ತಿದಂತಾಗಿದೆ. ಒಳ್ಳೆಯ ಕೆಲಸ ತಲುಪುತ್ತದೆ.
-ಕೆ. ವೆಂಕಟರಾಜು, ಚಾಮರಾಜನಗರ
*
ಇದೊಂದು ಜೀವಪರ, ಸಾಹಿತ್ಯಪರ ಸಂಘಟನೆ. ಇದನ್ನು ಕಟ್ಟಿ ಸತತ ಹತ್ತು ವರ್ಷ ಮುನ್ನಡೆಸೋದು ಸಾಮಾನ್ಯ ಮಾತಲ್ಲ. ಇದೊಂದು ಇತಿಹಾಸವೇ ಸರಿ.
-ಸಿದ್ಧರಾಮ ಎಸ್. ತಳವಾರ
*
ಜನ ಸಾಹಿತ್ಯ , ಜನ ಚಳುವಳಿ ಎಂದರೇನೆಂದು ದೇಶಕ್ಕೆ ದಶಕಕ್ಕೂ ಹೆಚ್ಚು ಕಾಲದಿಂದ ೧೦ ಮೇ ಸಾಹಿತ್ಯ ಸಮ್ಮೇಳನ ತೋರಿಸಿ ಕೊಡುತ್ತಿದೆ.
ಪ್ರಜಾಪ್ರಭುತ್ವದಲ್ಲಿ ಜನರೇ ಅದರಲ್ಲೂ ಪ್ರಜ್ಞಾವಂತ ಜನ ಒಂದೆಡೆ ಸೇರಿ ನಾಡು ಕಟ್ಟುವ ವಾರ್ಷಿಕ ಬ್ಲೂ ಪ್ರಿಂಟ್ ಹಾಕುವದು ಹೇಗೆ? ಎಂಬುದಕ್ಕೆ ಮೇ ಸಾಹಿತ್ಯ ಸಮ್ಮೇಳನ ಮಾದರಿ.
ಅಡುಗೆ ಮನೆಯ ಅಕ್ಕನಿಂದ ಮೈಕ್ ನಡೆಸಿದ ಹುಡುಗ ಮತ್ತು ನಾವೆಲ್ಲ ಬಿರ ಬಿರನೇ ಹೊರಟು ಬಂದ ನಂತರ ಕುರ್ಚಿಗಳನ್ನು ಪೇರಿಸಿದ ಕಾರ್ಮಿಕನ ತನಕ ಎಲ್ಲರೂ ಕೃಜ್ಞತೆಗೆ ಅರ್ಹರು.
ತಂಡದ ಶ್ರಮಕ್ಕೆ ಬೆಲೆ ಕಟ್ಟಲಾಗದು ಸರ್
ಧನ್ಯವಾದಗಳು.
-ಡಿ. ಎಂ ನದಾಫ್ ಅಫ್ಜಲಪುರ
*
ಮೇ ಸಾಹಿತ್ಯ ಮೇಳ
ಎಲ್ಲಾ ವಯೋಮಾನದವರನ್ನು ಹಿಡಿದಿಟ್ಟು ಚಿಂತನೆ ಯೋಚನೆಗಳಿಗೆ ಹಚ್ಚುವ ಪ್ರಸ್ತುತ ರಾಜಕಾರಣದ ಬಗ್ಗೆ ನೂರಾರು ಚರ್ಚೆಗಳನ್ನು ಹುಟ್ಟು ಹಾಕಿದೆ
ಮೇಳದಲ್ಲಿ ಭಾಗಿಯಾಗಿದ್ದು ನಿಜಕ್ಕೂ ನನಗೆ ಸಾರ್ಥಕ ಎನಿಸಿದೆ
-ಮಾಲತೇಶ ಮರೇಗೌಡರ ಹರಪನಹಳ್ಳಿ
*
೧೦ನೇ ಮೇ ಸಾಹಿತ್ಯ ಮೇಳಕ್ಕಾಗಿ ಹಾಕಿದ ತಂಡದ ಶ್ರಮಕ್ಕೆ ಬೆಲೆ ಕಟ್ಟಲಾಗದು. .
ಮುಂದಿನ ಮೇಳಕ್ಕೆ ಒಂದೆರಡು ದಿನ ಮುಂಚಿತವಾಗಿ ಬಂದು ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದ್ದೇನೆ.
ನಗುನಗುತ್ತಾ ನಮ್ಮನ್ನೆಲ್ಲಾ ಉಪಚರಿಸಿ ನಾವು ಎದುರಿಸಬಹುದಾದ ಮುಂದಿನ ತಲ್ಲಣಗಳು ಅದರ ಮಾರ್ಗೋಪಾಯಗಳ ಚಿಂತಿಸಿದ್ದು ಬಹಳ ಖುಷಿಯಾಯ್ತು. ನಿಮ್ಮ ಪ್ರೀತಿಗೆ ಶರಣು.
-ಶಶಿ ಅಪೂರ್ವ ಮಂಡ್ಯ