ಜ್ಯೋತಿ ಗೊಂಡಬಾಳಗೆ ಕಿತ್ತೂರ ಚನ್ನಮ್ಮ ರಾಜ್ಯ ಪ್ರಶಸ್ತಿ
aksharatvkannada news desk
ಕೊಪ್ಪಳ: ಇಲ್ಲಿನ ಪ್ರಗತಿಪರ ಹೋರಾಟಗಾರ್ತಿ, ಮಹಿಳಾ ಮುಖಂಡೆ, ಕರ್ನಾಟಕ ಸರಕಾರದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಎಂ. ಗೊಂಡಬಾಳ ಅವರಿಗೆ ಸಮಾಜ ಸೇವೆ ವಿಭಾಗದಲ್ಲಿ ರಾಜ್ಯಮಟ್ಟದ “ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ.
ಕುಷ್ಟಗಿ ತಾಲೂಕ ದೋಟಿಹಾಳ ಗ್ರಾಮದಲ್ಲಿ ಜೂನ್ ೨೫ ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವದು ಎಂದು ಸಂಘಟಕರಾದ ನಾಗರಾಜ ಕಾಳಗಿ, ಶಂಕ್ರಮ್ಮ ಕೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ನಿಮಿತ್ಯ ಕಾರ್ಯಕ್ರಮ ತಡವಾಗಿದ್ದು, ಮಹಿಳಾ ದಿನಾಚರಣೆ ನಿಮಿತ್ಯ ಸದರಿ ಪ್ರಶಸ್ತಿ ನೀಡಲಾಗುವದು, ಕಳೆದ ಎರಡು ದಶಕದಿಂದ ಯುವ ಸಂಘಟನೆಯಲ್ಲಿ ತೊಡಗಿರುವ ಜ್ಯೋತಿ ಗೊಂಡಬಾಳ ಕೊಪ್ಪಳ ಜಿಲ್ಲೆಯ ಏಕೈಕ್ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಹಿಳೆಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಕೆಲಸ ಮಾಡಿದ್ದಾರೆ, ದಶಕದ ಕಾಲ ವಿವಿದ ಹಂತದ ತರಬೇತುದಾರರಾಗಿ ಕೆಲಸ ಮಾಡಿದ್ದು, ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಸಂಚಾಲಕರಾಗಿ ಅನೇಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ, ಜಿಲ್ಲೆಯ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡ ಅವರು ಎರಡು ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಸಮಾಜ ಸೇವೆ ಸ್ನಾತಕೋತ್ತರ ಪದವಿ ಅಭ್ಯಾಸದಲ್ಲಿ ಕಿನ್ನಾಳ ಕಲೆಯನ್ನು ಅಧ್ಯಯನ ಮಾಡಿದ್ದಾರೆ, ಹಕ್ಕಿಪಿಕ್ಕಿ ಜನರ ಸಮಸ್ಯೆಗೆ ಸ್ಪಂದಿಸಿ ಸರಕಾರ ಮಟ್ಟದಲ್ಲಿ ಹಕ್ಕುಪತ್ರ ಸಿಗುವ ಹಾಗೆ ಮಾಡಿದ್ದಾರೆ, ಜ್ಯೋತಿ ಗೊಂಡಬಾಳ ಅವರಿಗೆ ಕಳೆದ ವರ್ಷ ಮಾತೃಭೂಮಿ ರಾಷ್ಟ್ರೀಯ ಪ್ರಶಸ್ತಿ ಸಹ ಲಭಿಸಿದೆ.
ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಕಾಡಾ ಅಧ್ಯಕ್ಷ ಹಸಸಾಬ್ ದೋಟಿಹಾಳ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹುಚ್ಚಮ್ಮ ಚೌಧರಿ, ಬಾಗಲಕೋಟೆಯ ಲಕ್ಷ್ಮೀ ಗೌಡರ್ ಸೇರಿ ಅನೇಕರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.