ನಿಷ್ಕಳಂಕ ದಲಿತ ನಾಯಕ ಹೆಚ್. ಆಂಜನೇಯಗೆ ಎಂ.ಎಲ್.ಸಿ ಸ್ಥಾನ ನೀಡಿ
aksharatvkannada, badalavane news desk:
ಗಂಗಾವತಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮುತ್ಸದ್ದಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೆ ಎಂ.ಎಲ್.ಸಿ ಸ್ಥಾನ ನೀಡಬೇಕು ಎಂದು ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಲ್ಲೇಶ ದೇವರಮನಿ ಅವರು ಮುಖಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ದೇವರಮನಿ ಅವರು, ಮಾಜಿ ಸಚಿವ ಹೆಚ್.ಆಂಜನೇಯ ಅವರು ಹಿರಿಯ ಅನುಭವಿ ರಾಜಕಾರಣಿ ಆಗಿದ್ದು, ಅವರ ಸೇವೆ ನಾಡಿಗೆ ಅಗತ್ಯವಿದೆ. ಹೆಚ್.ಆಂಜನೇಯ ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕಳಂಕ ರಹಿತ ರಾಜಕಾರಣಿಯಾಗಿ ಸರ್ವ ಸಮುದಾಯಗಳ ಹಿತದೃಷ್ಟಿಯಿಂದ ಆಡಳಿತ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಬೆಳವಣಿಗೆಯಲ್ಲಿ ಇವರದು ಪ್ರಮುಖ ಪಾತ್ರವಿದೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸದನದಲ್ಲಿ ಕೆಳವರ್ಗ, ಸಮುದಾಯ, ಶೋಷಿತರ ಪರ ಧ್ವನಿ ಎತ್ತುವ ಮೂಲಕ ಸಾಮಾಜಿಕ ನ್ಯಾಯ ಒದಗಿಕೊಟ್ಟಿದ್ದಾರೆ. ಬುಡಕಟ್ಟು ಜನಾಂಗ, ಹಕ್ಕಿಪಿಕ್ಕಿ ಸಮುದಾಯ, ಮಾದಿಗ, ದಲಿತ ಸಮುದಾಯಗಳ ಕುಟುಂಬಗಳ ಮನೆ ರಹಿತರಿಗೆ ಮನೆ, ನಿವೇಶನ ರಹಿತರಿಗೆ ನಿವೇಶನ ನೀಡಿದ್ದಾರೆ ಹಾಗೂ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯ ಬಲಪಡಿಸಿದ್ದಾರೆ. ಗುತ್ತಿಗೆದಾರರಿಗೆ ಶೇಕಡಾವಾರು ಮೀಸಲಾತಿ ನಿಗದಿ ಪಡಿಸಿದ್ದಾರೆ. ಸರಕಾರಿ ವಿವಿಧ ಯೋಜನೆಗಳ ಅಡಿಯಲ್ಲಿ ಅಗತ್ಯ ಸೌಲಭ್ಯಗಳನ್ನು ದೊರಕಿಸಿ ಕೊಡುವ ಮೂಲಕ ಹಿಂದುಳಿದ ಸಮುದಾಯಗಳ ಪ್ರಗತಿಗೆ ಮುನ್ನುಡಿ ಬರೆದಿದ್ದಾರೆ. ಇಂತಹ ನಿಷ್ಕಳಂಕ, ಪಕ್ಷನಿಷ್ಠ, ಪಾರದರ್ಶಕ ನೇರ ನುಡಿಯ ಸರಳ ಸಜ್ಜನ ವ್ಯಕ್ತಿಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಪ್ರಥಮ ಆದ್ಯತೆ ನೀಡಿ ಗೌರವಿಸಬೇಕು. ಪ್ರಸ್ತುತ ರಾಜ್ಯದಲ್ಲಿ ಎಂ.ಎಲ್.ಸಿ ಆಕಾಂಕ್ಷಿಗಳು ಹೆಚ್ಚಾಗಿದ್ದು, ಸಹಜವಾಗಿಯೇ ಟಿಕೆಟ್ ಗಾಗಿ ಪೈಪೋಟಿ ಹೆಚ್ಚಿದೆ. ಹಾಗಂತ ಅರ್ಹರನ್ನು ಬಿಟ್ಟು ಹಣವಂತರಿಗೆ ಟಿಕೆಟ್ ನೀಡಬಾರದು. ಪಕ್ಷದ ನಿಷ್ಠಾವಂತ ಜನನಾಯಕ ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೆ ಎಂ.ಎಲ್.ಸಿ ಟಿಕೆಟ್ ನೀಡಿ ಗೆಲ್ಲಿಸಿ ಸಚಿವ ಸ್ಥಾನಮಾನ ನೀಡಬೇಕು. ಈ ಮೂಲಕ ಅವರ ರಾಜಕೀಯ ಅನುಭವವನ್ನು ಪಕ್ಷವು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಕ್ಷದ ವರಿಷ್ಠರಿಗೆ ದೇವರಮನಿ ಒತ್ತಾಯಿಸಿದ್ದಾರೆ.