ಮೇ ಸಾಹಿತ್ಯ ಮೇಳ ಕರಪತ್ರ, ಆಮಂತ್ರಣ ಪತ್ರಿಕೆ ಬಿಡುಗಡೆ
*ಸಂವಿಧಾನದ ಆಶಯಗಳ ರಕ್ಷಣೆಗಾಗಿ ಎಲ್ಲರೂ ಬನ್ನಿ-ಬೆಟ್ಟದೂರ*
ಕೊಪ್ಪಳ : ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳ ರಕ್ಷಣೆಯ ನಿಟ್ಟಿನಲ್ಲಿ ಇಡೀ ನಾಡಿನ ಪ್ರಗತಿಪರರೆಲ್ಲರೂ ಸೇರುತ್ತಿರುವ ಮೇ ಸಾಹಿತ್ಯ ಮೇಳ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ ಭಾಗವಹಿಸಿ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕರೆ ನೀಡಿದರು.
ಅವರು ಕೊಪ್ಪಳದಲ್ಲಿ ೨೫ ಮತ್ತು ೨೬ ಎರಡು ದಿನಗಳ ಕಾಲ ನಡೆವ ೧೦ ಮೇ ಸಾಹಿತ್ಯ ಮೇಳದ ಕರಪತ್ರ ಹಾಗೂ ಆಮಂತ್ರಣ ಪತ್ರಿಕೆಯನ್ನು ವಿಶಿಷ್ಟವಾಗಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ನಗರದ ಅಶೋಕ ವೃತ್ತದ ಬಳಿ ಇರುವ ಸಾಹಿತ್ಯ ಭವನದ ಹೊರ ಆವಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಹಾಗೂ ಡಾ.ವಿ.ಬಿ.ರಡ್ಡೇರ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಸರ್ವಾಧಿಕಾರದ ವಿರುದ್ದ ಎಲ್ಲರೂ ಹೋರಾಡಬೇಕಾಗಿದೆ. ಸಂವಿಧಾನವನ್ನು ರಕ್ಷಣೆ ಮಾಡಬೇಕಿದೆ . ಈ ನಿಟ್ಟಿನಲ್ಲಿ ಕೊಪ್ಪಳದಲ್ಲಿ ನಡೆಯುತ್ತಿರುವ ಮೇ ಸಾಹಿತ್ಯ ಮೇಳ ಎಲ್ಲರ ಧ್ವನಿಯಾಗಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಡಾ. ವಿ.ಬಿ.ರಡ್ಡೇರ್ ಹೇಳಿದರು.
ಶರಣಪ್ಪ ಬಾಚಲಾಪೂರ ಹಾಗೂ ಪ್ರಕಾಶ ಕಂದಕೂರ, ಮಹಾಂತೇಶ ಮಲ್ಲನಗೌಡರ ಕರಪತ್ರಗಳನ್ನು ಬಿಡುಗಡೆ ಮಾಡಿದರು. ಪ್ರಾಸ್ತಾವಿಕವಾಗಿ ಬಸವರಾಜ್ ಶೀಲವಂತರ್ ಹಾಗೂ ಡಿ.ಬಿ. ಬಡಿಗೇರ ಮಾತನಾಡಿದರು. ಈ ಸಂದರ್ಭದಲ್ಲಿ ಕಾಸಿಂಸಾಬ ಸರ್ದಾರ್, ಗಾಳೆಪ್ಪ ಮುಂಗೋಲಿ, ಎಸ್.ಎ.ಗಫಾರ್, ಮಹಾಂತೇಶ್ ಕೊತಬಾಳ, ರುದ್ರಪ್ಪ ಭಂಡಾರಿ, ಶರಣು ಶೆಟ್ಟರ್, ಲಕ್ಷ್ಮಣ ಪೀರಗಾರ, ಎಂ.ಕೆ.ಸಾಹೇಬ್, ಕಾಶಪ್ಪ ಚಲವಾದಿ, ಬಸವರಾಜ್ ಸೂಳಿಬಾವಿ, ಎಚ್.ವಿ.ರಾಜಾಬಕ್ಷಿ, ಸಿರಾಜ್ ಬಿಸರಳ್ಳಿ ಉಪಸ್ಥಿತರಿದ್ದರು.