ಸಂಗಣ್ಣ ಕರಡಿ ಕಾಂಗ್ರೆಸ್ಗೆ ಬಂದ್ರೆ ತುಂಬಾ ನಷ್ಟ ಅಣ್ಣಾ ! ಹುಷಾರು?
ಬದಲಾವಣೆ ದಿನಪತ್ರಿಕೆ ವಿಶೇಷ ವರದಿ:
ಕೊಪ್ಪಳ: ಸದ್ಯ ಇದು ರಾಜಕೀಯ ಮಾತನಾಡುವ ಸಮಯ, ಹಾಗಂತ ಅದನ್ನೇ ಮಾತನಾಡಬೇಕು ಅಂತೇನಿಲ್ಲ, ಹಾಗೇ ಸುಮ್ಮನೇ ಸ್ವಲ್ಪ ಮಾಹಿತಿಗಾಗಿ, ಸಣ್ಣ ತಿಳುವಳಿಕೆಗಾಗಿ. ಈ ಬರಹವನ್ನು ತಮ್ಮ ಮುಂದೆ ಇಡುತ್ತಿದ್ದೇನೆ, ಇಷ್ಟ ಆಗಬಹುದು ಎಂಬುದು ನನ್ನ ಅನಿಸಿಕೆ. ಇನ್ನೊಂದು ವಿಷಯ ಸಂಗಣ್ಣ ಕರಡಿ ಅವರ ಬಗ್ಗೆ ಹೀಗೆ ಬರೆಯಲು ಕಾರಣ ಅವರ ಸೌಮ್ಯ ಗುಣ ಮತ್ತೆ ನಿರಹಂಕಾರಿ ವ್ಯಕ್ತಿತ್ವ, ಕೆಲವರಿಗೆ ಈ ನಾಲ್ಕು ಶಬ್ದಗಳೇ ಇಷ್ಟ ಆಗಲಿಕ್ಕಿಲ್ಲ, ಆದರೆ ಏನು ಮಾಡೋದು ಸತ್ಯವನ್ನು ಅರಗಿಸಿಕೊಳ್ಳಲು ಬಹಳ ಕಷ್ಟವಾಗುತ್ತದೆ, “ಬಟ್ ಇಟ್ ಈಸ್ ಟೈಮ್ ಟು ಡೈಜಿಷ್ಟ್”.
ಎಸ್. ಸಂಗಣ್ಣ ಕರಡಿ ಅವರು ೭೪ ವರ್ಷದ ಪ್ರಾಯದವರು, ಮೇ ೮ಕ್ಕೆ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದು ಚುನಾವಣೆ ಗದ್ದಲದಲ್ಲಿ ಯಾರಿಗೂ ಗೊತ್ತೇ ಆಗಲಿಲ್ಲ ಅಥವಾ ಅಧಿಕಾರ ಕಳೆದುಕೊಂಡ ಸಂಗಣ್ಣ ಅವರಿಗೆ ಶುಭಾಶಯ ಕೋರುವ ಮನಸ್ಸು ಉಳಿದಿಲ್ಲ ಅನಿಸುತ್ತಿದೆ ಇಲ್ಲವೇ ವಿಕಿಪಿಡಿಯಾ ಮಾಹಿತಿಯಂತೆ ಅವರು ನವೆಂಬರ್ ೧೮ಕ್ಕೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ ಅದೇನೆ ಇರಲಿ ಸುಮಾರು ನಾಲ್ಕು ದಶಕದ ಕಾಲ ರಾಜಕೀಯದಲ್ಲಿ ತಮ್ಮ ಜೀವನ ಸವೆಸಿದ ಅವರು ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿ ಪಕ್ಷೇತರವಾಗಿ ಶಾಸಕರಾದರು ಆಗ ಅವರ ಸಿಂಬಲ್ ಛತ್ರಿ, ಮುಂದೆ ಅವರು ಜನತಾ ದಳ ಸಂಯುಕ್ತ ಹಾಗೂ ಜಾತ್ಯತೀತ ಹಿಡಿದುಕೊಂಡು ಶಾಸಕರಾದರು ಹಾಗೇ ಅಲ್ಲಿಂದ ಆಪರೇಷನ್ ಕಮಲವಾಗಿ ಬೈ ಎಲೆಕ್ಷನ್ ಗೆದ್ದುಕೊಂಡು ಅಲ್ಲಿಯೇ ಉಳಿದರು, ಮುಂದೆ ರಾಘವೇಂದ್ರ ಹಿಟ್ನಾಳ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸೋತು ಸಂಸತ್ ಚುನಾವಣೆಗೆ ಅಣಿಯಾದರು ೨೦೧೪ರಲ್ಲಿ ಮೊದಲ ಸಲ ಮೋದಿ ಹವಾದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರ ತಂದೆ ಬಸವರಾಜ ಹಿಟ್ನಾಳ ವಿರುದ್ಧ ಗೆದ್ದು ಬೀಗಿದರು, ಮತ್ತೊಮ್ಮೆ ೨೦೧೯ ರಲ್ಲಿ ಶಾಸಕರ ಸಹೋದರ ರಾಜಶೇಖರ ಹಿಟ್ನಾಳ ವಿರುದ್ಧ ಗೆದ್ದಬಂದರು, ೨೦೨೪ರಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿತು ಕೆಲವು ದಿನ ಕಾದು ಕಾಂಗ್ರೆಸ್ ಸೇರ್ಪಡೆಗೊಂಡರು, ಈಗ ಹೊಸ ಇತಿಹಾಸ ಹಳೆಯ ಕಥೆಯ ಮೆಲುಕು.
ಸಂಗಣ್ಣ ಕರಡಿ ತಮ್ಮ ಮಕ್ಕಳು ಮತ್ತು ಸೊಸೆಯ ರಾಜಕೀಯವನ್ನು ಕಟ್ಟಿಕೊಡಲು ಆಗಲಿಲ್ಲ ಅವರು ಹಣ ಮಾಡಲಿಲ್ಲ, ಯಾರನ್ನೂ ಬೆಳೆಸಲಿಲ್ಲ ಎಂಬ ಟೀಕೆ ಟಿಪ್ಪಣೆ ಮಾಡುತ್ತಲೇ ಇದ್ದಾರೆ ಅದು ಇದ್ದಿದ್ದೇ. ಆದರೆ ಸಂಗಣ್ಣ ಅವರು ಸರ್ವಧರ್ಮಗಳ ಜನರನ್ನು ಜೊತೆಗೆ ಸಾಧ್ಯವಾದಷ್ಟು ಕರೆದುಕೊಂಡು ಹೋಗಿದ್ದಾರೆ, ಅವರು ಅಧಿಕಾರದಲ್ಲಿ ಇದ್ದಾಗ ಈಗಿನಷ್ಟು ಹಣ ಬರುತ್ತಿರಲಿಲ್ಲ, ಮತ್ತು ಸಂಸದ ಸ್ಥಾನದಲ್ಲಿದ್ದುಕೊಂಡು ಕಾರ್ಯಕರ್ತರಿಗೆ ಕೆಲಸ ಕೊಡಿಸಲು ಸಹ ಆಗುತ್ತಿರಲಿಲ್ಲ ಎಂಬುದು ಸತ್ಯ, ಅವರು ಎಲ್ಲಿಯೂ ಸಚಿವರಾಗಲು ಸಾಧ್ಯವಾಗಲಿಲ್ಲ ಎಂಬ ನೋವು ಕೊನೆಗೂ ಉಳಿದುಕೊಂಡಿತು.
ಸಂಗಣ್ಣ ಕರಡಿ ಕಾಂಗ್ರೆಸ್ ಹೋಗುವ ನಿರ್ಧಾರ ಮಾಡಿದ ಕ್ಷಣದಲ್ಲೇ ಅದೇ ಪಕ್ಷದ ಮುಖಂಡರು ತಮಗೆ ಯಾವುದೇ ನಷ್ಟವಿಲ್ಲ ಎಂದರು, ಅವರ ಸುತ್ತಲೇ ಸುತ್ತುತ್ತಿದ್ದ ಅನೇಕ ಮುಖಂಡರು ಈಗ ಇವರಿಂದ ದೂರವಾಗಿದ್ದಾರೆ, ಅವರ ಪುತ್ರರಾದ ಅಮರೇಶ ಕರಡಿ ಒಮ್ಮೆ ಜಿ. ಪಂ. ಮತ್ತು ಒಮ್ಮೆ ವಿದಾನಸಭೆ ಎರಡರಲ್ಲೂ ಸೋತು ಚುನಾವಣೆ ರಾಜಕೀಯ ಇನ್ನಾಗಲ್ಲ ಅಂದುಕೊಂಡು ಸುಮ್ಮನಾದರು, ಆದರೆ ೨೦೨೩ರಲ್ಲಿ ಒಮ್ಮೆ ಶಾಸಕರಾಗಿ ಮಂತ್ರಿ ಆಗುವ ಆಸೆಯಿಂದ ತಮಗೆ ಟಿಕೆಟ್ ಕೊಡಿ ಎಂದು ಕೇಳಿದ್ದರು ಆದರೆ ಅದು ಸುತ್ತಿಬಳಸಿ ತಮ್ಮ ಸೊಸೆಗೆ ಬಂದಾಗ ಒಲ್ಲದ ಮಸ್ಸಿನಲ್ಲಿಯೇ ಚುನಾವಣೆ ಮಾಡಿದರು, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೂ ಸುಮಾರು ೩೬ ಸಾವಿರ ಮತಗಳ ಅಂತೆದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರ ವಿರುದ್ಧ ಸೋಲು ಅನುಭವಿಸಿದರು. ಗವಿಸಿದ್ದಪ್ಪ ಕರಡಿ ಮಾತ್ರ ಲೇಬಗೇರಿ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಸದಸ್ಯರಾದರು, ಅವರು ಕಾಂಗ್ರೆಸ್ನ ಪ್ರಸನ್ನ ಗಡಾದ ಅವರನ್ನು ಸೋಲಿಸಿದ್ದರು.
ಎಸ್. ಸಂಗಣ್ಣ ಕರಡಿ ಅವರು, ಈ ವಯಸ್ಸಿನಲ್ಲಿ ತಮ್ಮ ಮನೆಯಲ್ಲಿ ನಿವೃತ್ತರಾಗಿ ಆರಾಮವಾಗಿ ಮದುವೆ ಮುಂಜ್ವಿ ಅಂತಾ ಇರಬೇಕಿತ್ತು ಎನ್ನುತ್ತಾರೆ ಕೆಲವು ರಾಜಕೀಯ ವಿಚಾರವಾದಿಗಳು. ಅದೇನೆ ಇರಲಿ, ಸಂಗಣ್ಣ ಕರಡಿ ಅವರು ತಮ್ಮ ಮಕ್ಕಳ ಭವಿಷ್ಯ ಹಾಗ ತಾವೇ ಹೇಳಿದಂತೆ ರಾಜಕೀಯ ಹೊರತಾಗಿ ಏನೂ ಗೊತ್ತಿಲ್ಲ ಅದನ್ನೇ ಮಾಡಬೇಕು ಇನ್ನು ಬಿಜೆಪಿ ಅವರು ಸಹ ಸಂಗಣ್ಣ ಅವರನ್ನು ಉತ್ತಮವಾಗಿ ಬೀಳ್ಕೊಟ್ಟಿದ್ದರೂ ಸುಮ್ಮನೇ ಅಲ್ಲೇ ಇರುತ್ತಿದ್ದರೋ ಗೊತ್ತಿಲ್ಲ.
ಇನ್ನು ಮತ್ತೊಂದು ಸಂಗತಿ, ಸಂಗಣ್ಣ ಬಿಜೆಪಿಯಲ್ಲಿಯೇ ಇದ್ದರೂ ಯಾವ ಅಧಿಕಾರವೂ ಸಿಗುವ ಸಾಧ್ಯತೆ ಇರಲಿಲ್ಲ. ಸಂಗಣ್ಣಗೆ ಮುಂದೆ ಶಾಸಕ ಆಗುವ ಅವಕಾಶ ಇಲ್ಲ, ಲೋಕಸಭೆ ಮುಗಿದ ಅಧ್ಯಾಯ, ವಿಧಾನ ಪರಿಷತ್ಗೆ ಅಥವಾ ರಾಜ್ಯಸಭೆಗೆ ಅವರನ್ನು ಕಳಿಸುವ ಇರಾದೆಯೂ ಬಿಜೆಪಿ ಅವರಿಗೆ ಇರಲಿಲ್ಲ, ಮತ್ತು ರಾಘವೇಂದ್ರ ಹಿಟ್ನಾಳ ಅವರ ಹಡಿತ ತಪ್ಪಿಸಿ ಜಿಲ್ಲಾ ಪಂಚಾಯತಿ ಅಧಿಕಾಋ ಹಿಡಿಯಲೂ ಸಾಧ್ಯವಿರಲಿಲ್ಲ ಇದೆಲ್ಲಾ ಇರುವಾಗ ಸಂಗಣ್ಣ ಅವರಿಗೆ ಒಂದಿಷ್ಟು ಗೌರವ, ಒಂದಿಷ್ಟು ಸಹಾಯ, ಜಿಲ್ಲಾ ಪಂಚಾಯತಿ ಗದ್ದುಗೆ ಏರುವ ಅವಕಾಶವಿದೆ, ವಿಧಾನ ಪರಿಷತ್ಗೂ ಸಂಗಣ್ಣ ಹೋಗುವ ಸಾಧ್ಯತೆಯೂ ಇದೆ. ಈಗ ಅವರ ನಿರ್ಧಾರ ತಮ್ಮ ಕುಟುಂಬದ ರಾಜಕೀಯ ಮತ್ತು ಉದ್ಯಮ ಬೆಳೆಸುವ ಅವಕಾಶವನ್ನು ಉಳಿಸಿಕೊಂಡಿದ್ದಾರೆ.
ಅದರ ಜೊತೆಗೆ ಸಂಗಣ್ಣ ಅವರು ಕಾಂಗ್ರೆಸ್ಗೆ ಒಂದಿಷ್ಟು ಬಲಬಂದಿದ್ದು ಸಹ ಸುಳ್ಳಲ್ಲ, ಈಗ ಲೇಖನದ ಶೀರ್ಷಿಕೆಯ ವಿಷಯದಂತೆ ಸಂಗಣ್ಣ ತಮ್ಮ ಪಂಚಮಸಾಲಿ ಸಮುದಾಯದ ಮತಗಳನ್ನು ಬಿಜೆಪಿಯ ಪಂಚಮಸಾಲಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ವಿರುದ್ಧ ಮತತರಲು ಸಾಧ್ಯವಾಗಲ್ಲ ಎಂಬುದು ಸತ್ಯ ಆದರೆ ಸಂಗಣ್ಣ ಅವರು ಎಲ್ಲಾ ಜಾತಿ ಧರ್ಮದ ಜನರ ಮತಗಳನ್ನು ಕಾಂಗ್ರೆಸ್ಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವದಂತೂ ಸತ್ಯ. ಕುಷ್ಟಗಿ, ಯಲಬುರ್ಗಾ, ಮಸ್ಕಿಯಲ್ಲಿ ಕೆಲಸ ಮಾಡದಿದ್ದರೂ ಉಳಿದ ಕಡೆಗೆ ಅವರ ಸಾಮರ್ಥ್ಯ ಕೆಲಸ ಮಾಡಿದೆ, ಇನ್ನು ಸಂಗಣ್ಣ ಅವರಿಂದ ನೊಂದ ಜೀವಗಳು ಅವರನ್ನು ಬಿಟ್ಟು ಕಾಂಗ್ರೆಸ್ಸಿಗೆ ಬಂದಿದ್ದವು ಆದರೆ ಸಂಗಣ್ಣರೇ ಇಲ್ಲಿಗೆ ಬಂದಿದ್ದಾರೆ ಎಂದು ವ್ಯಂಗ್ಯ ಮಾಡಿದವರು ಇದ್ದಾರೆ.
ಸಂಗಣ್ಣ ಅವರಿಗೆ ಕಾಂಗ್ರೆಸ್ ಉತ್ತಮವಾಗಿ ನಡೆಸಿಕೊಳ್ಳಲಿ ಜೊತೆಗೆ ಕಾಂಗ್ರೆಸ್ ಸೇರಿದ ಮುಖಂಡರುಗಳನ್ನು ಚನ್ನಾಗಿ ನೋಡಿಕೊಳ್ಳುವ ಜೊತೆಗೆ ಮೂಲ ಕಾಂಗ್ರೆಸ್ಸಿಗರು ಹಾಗೂ ನಿಷ್ಠಾವಂತ ಕಾರ್ಯಕರ್ತರು ಮುನಿಸಿಕೊಳ್ಳದಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪೂರ, ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಮುತುವರ್ಜಿವಹಿಸಿಕೊಳ್ಳಬೇಕು, ಪಕ್ಷದ ಬಲವರ್ಧನೆಗೆ ಅದರ ಅಗತ್ಯವಿದೆ. ಇನ್ನಷ್ಟು ನಾಳೆಗೆ…