ಕೊಪ್ಪಳದಲ್ಲಿ ಹೋಳಿ – ನಕುಲ್ ಡಿಜೆ – ಸಂಸದರ ಆಸಕ್ತಿ – ಉದ್ಯೋಗದ ಪ್ರಶ್ನೆ?
ಕೊಪ್ಪಳ: ನಗರದ ತಾಲೂಕ ಕ್ರೀಡಾಂಗಣದಲ್ಲಿ ಹಾಲಿ ಕಾಂಗ್ರೆಸ್ ಸಂಸದ ಕೆ. ರಾಜಶೇಖರ ಹಿಟ್ನಾಳ ಅವರ ವಿಶೇಷ ಆಸಕ್ತಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೊದಲ ಬಾರಿಗೆ ಸಾಮೂಹಿಕ ಬಣ್ಣದೋಕುಳಿ ಆಚರಿಸುತ್ತಿದ್ದಾರೆ. ಇದರ ಸಾಧಕ ಬಾದಕಗಳ ಪ್ರಶ್ನೆ ಒಂದೆಡೆಯಾದರೆ ಇವೆಲ್ಲಾ ಬೇಕಾ? ಎಂಬ ಪ್ರಶ್ನೆ ಸಹ ಮೂಡುತ್ತಿವೆ.
ಕೊಪ್ಪಳದಲ್ಲಿ ಬಣ್ಣ ಆಡುವ ಸಂಸ್ಕೃತಿ ಮೆರಗು ಇದ್ದೇ ಇದೆ. ಇದೊಂದು ಹಿಂದೂಗಳ ಸಾಂಪ್ರದಾಯಿಕ ಹಬ್ಬ, ಆದರೂ ಸರಕಾರ ಇದಕ್ಕೆ ರಜೆ ಘೋಷಣೆ ಮಾಡಿಲ್ಲ. ಬೇರೆ ಯಾವುದಾದರೊಂದು ರಜೆ ತೆಗೆದು ಇದಕ್ಕೆ ರಜೆ ಕೊಡಬೇಕು. ಕಾರಣ ಬಹುತೇಕ ಜನರು ಇಲ್ಲಿ ಹಬ್ಬ ಮಾಡುತ್ತಿದ್ದರೆ ಕೇವಲ ಸರಕಾರಿ ನೌಕರರು ಮಾತ್ರ ನಾಮಕೆವಾಸ್ತೆ ಕೆಲಸ ಮಾಡುವಂತಾಗಿದೆ. ಹಬ್ಬದಂದು ಬಹುತೇಕ ಎಲ್ಲಾ ಸಾರ್ವಜನಿಕ ಅಂಗಡಿ ಮುಗ್ಗಟ್ಟು ಬಂದಾಗಿರುತ್ತವೆ, ಸಂಚಾರ ದಟ್ಟಣೆಯೂ ಇರುವದಿಲ್ಲ ಅದಕ್ಕೆ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಒತ್ತಾಯವೂ ಇದೆ.
ಇನ್ನು ಕೊಪ್ಪಳದಲ್ಲಿ ಮೊದಲ ಬಾರಿಗೆ ರೇನ್ ಡ್ಯಾನ್ಸ್ ಮಾಡಲು ಸಜ್ಜಾಗಿರುವ ಜನರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಬರುವದರಿಂದ ರೇನ್ ಡ್ಯಾನ್ಸ್ಗೆ ಹಾಕಿದ ಜಾಗೆ ಕಡಿಮೆ ಆಗಿ ಸ್ವಲ್ಪ ಗದ್ದಲ ಆಗುವ ಸಂಭವ ಇದೆ. ರಾಜ್ಯದ ಪ್ರಖ್ಯಾತ ಮತ್ತು ಯುವಜನರ ಫೇವರಿಟ್ ನಕುಲ ಡಿಜೆ ಮಿಕ್ಸರ್ ಬಂದಿರುವದರಿಂದ ಹಬ್ಬಕ್ಕೆ ಮತ್ತಷ್ಡು ಕಳೆ ಬಂದಿದೆ. ಇದೆಲ್ಲವನ್ನು ಸಂಸದ ರಾಜಶೇಖರ ಹಿಟ್ನಾಳ ಅವರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಮೂಲಕ ಮಾಡುತ್ತಿದ್ದಾರೆ. ಹಣಕಾಸಿನ ನೆರವು ಯಾರದ್ದು ಎಂಬುದು ಯಕ್ಷ ಪ್ರಶ್ನೆಯಾದರೂ ಇದಕ್ಕೆ ಸಂಸದರೇ ಮುಂದೆ ನಿಂತು ಖರ್ಚು ಮಾಡಿದ್ದಾರೆ.
ಇದು ಹೀಗಿರುವಾಗ ಇದರ ಪ್ರಚಾರವನ್ನು ನೋಡಿದ ಅನೇಕ ಬಾಗದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ರಸ್ತೆ ಮಾಡಿಸಿ ಪುಣ್ಯಕಟ್ಟಿಕೊಳ್ಳಿ ನಂತರ ಇಂತವೆಲ್ಲಾ ಮಾಡಿ ಎನ್ನುತ್ತಿದ್ದರೆ, ಇನ್ನೊಂದೆಡೆ ಸಭ್ಯ ಸಭ್ಯ ಎನ್ನುತ್ತಿದ್ದೀರಿ ಆದರೆ ಅಲ್ಲಿಗೆ ಕುಡಿದು ಬರುವ ಜನರಿಂದ ಆಗುವ ಗದ್ದಲ ಹೇಗೆ ತಡೆಯುವಿರಿ ಎಂಬ ವಾದ ಮತ್ತೊಂದೆಡೆ.
ಇನ್ನು ಈ ಎಲ್ಲಾ ಕಾರ್ಯಕ್ರಮಕ್ಕೆ ಹೊರಗಿನ ಜನರು ಬಂದು ವ್ಯವಸ್ಥೆ ಮಾಡುತ್ತಿದ್ದು, ಹೊಸಪೇಟೆ, ಹುಬ್ಬಳ್ಳಿ, ಬೆಳಗಾವಿ ಜನರು ದುಡಿದುಕೊಂಡು ಹೋಗುತ್ತಾರೆ, ಇಲ್ಲಿನವರು ನಾಲ್ಕು ತಾಸು ಕುಣಿದು ಮನೆಗೆ ಹೋಗುತ್ತಾರೆ ಅದರಿಂದ ಇಲ್ಲಿನ ಜನರಿಗೆ ಯಾವ ಲಾಭ ಎಂಬ ಪ್ರಶ್ನೆ ಇನ್ನೊಂದೆಡೆ ಇದೆ. ಸರಕಾರಗಳ ಉತ್ಸವವೂ ಹಾಗೇ ಆಗುತ್ತವೆ. ಅವಸರದಲ್ಲಿ ಕಾರ್ಯಕ್ರಮ ರೂಪಿಸಿ ಅದರ ಎಲ್ಲಾ ಸಿದ್ಧತೆಗೆ ಹೊರಗಿನ ಇವೆಂಟ್ ಮ್ಯಾನೇಜಮೆಂಟ್ನವರಿಗೆ ಕೊಡುತ್ತಾರೆ ಕೋಟಿ ಕೋಟಿ ಹಣ ಅವರ ಪಾಲಾದರೆ ಇಲ್ಲಿನ ಜನರಿಗೆ ಅದರಿಂದ ಯಾವ ಲಾಭ ಎಂಬುದಾಗಿದೆ. ಈಗ ಇಲ್ಲಿನ ಕಾರ್ಖಾನೆಗಳನ್ನು ವಿರೋಧಿಸುತ್ತಿರುವ ಜನರು ಎತ್ತಿದ ಮೊದಲ ಪ್ರಶ್ನೆ ನಾವು ಸಾಯೋರು ಉದ್ಯೋಗ ಮಾತ್ರ ಪರರಾಜ್ಯದವರಿಗೆ, ನಮಗೆ ರೋಗಗಳು ಮಾತ್ರ ಎಂಬಂತೆ ಇಲ್ಲಿಯೂ ಹಾಗೆ ಆಗುತ್ತದೆ. ಮತ ಹಾಕಿ ಗೆಲ್ಲಿಸಲು ಇಲ್ಲಿನ ಜನರು ನೆನಪಾಗುವ ಜನಪ್ರತಿನಿಧಿಗಳಿಗೆ ತಾವು ಗೆದ್ದ ಮೇಲೆ ತಮ್ಮ ಪ್ರಚಾರದಿಂದ ಹಿಡಿದು ಎಲ್ಲವನ್ನೂ ಮಾಡಲು ಹೊರಗಿನವರು ಬೇಕು. ಅವರನ್ನೇ ಮೆರೆಸಿ ಅವರನ್ನೇ ಬೆಳೆಸುವ ಮನಸ್ಥಿತಿ. ಜೊತೆಗೆ ಇತ್ತೀಚೆಗೆ ಪಕ್ಷಕ್ಕೆ ಬಂದವರನ್ನೇ ಅದಕ್ಕೆಲ್ಲಾ ಕರೆದುಕೊಂಡು ಓಡಾಡುವ ಅವರು ನೆಪಕ್ಕೆ ಅಥ್ಲೆಟಿಕ್ಸ್ ಅಸೋಸಿಯೇಷನ್ ಮುಂದಿಟ್ಟಿದ್ದಾರೆ.
ಸಾಂಪ್ರದಾಯಿಕ ಹಬ್ಬದ ಆಚರಣೆ ಇದರಿಂದ ಕಳೆಗುಂದಿ ಕೇವಲ ಮನರಂಜನೆ ಆಗುತ್ತಿರುವದಕ್ಕೂ ಸಹ ಹಲವಾರು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲದಕ್ಕೂ ಮೂಲ ಕಾಂಗ್ರೆಸ್ಸಿಗರು, ತಮಗೆ ದುಡಿದವರನ್ನು ಬಿಟ್ಟು ಎಲ್ಲಾ ಕೆಲಸ ಮಾಡುವದರಿಂದ ಬೇಸರಗೊಂಡ ಗುಂಪು ಗುಸು ಗುಸು ಶುರು ಮಾಡಿದೆ? ಕಾಲವೇ ಉತ್ತರಿಸಬೇಕು.
ಜನರು ಖುಷಿಪಡಲಿ ಎಂದು ಮಾಡುತ್ತಿದ್ದೇವೆ, ಉಟೋಪಚಾರವಿದೆ, ಮಹಿಳೆಯರಿಗೆ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಇದೆ, ರೇನ್ ಡ್ಯಾನ್ಸ್ ಇದೆ. ನಕುಲ್ ಡಿಜೆ ಇದೆ. ಮೊದಲ ಸಲ ಮಾಡುತ್ತಿದ್ದೇವೆ.
– ಸಂಸದ ರಾಜಶೇಖರ ಹಿಟ್ನಾಳ