ಕಿರ್ಲೋಸ್ಕರ್ ಕಂಪನಿಯಿಂದ ಬೇವಿನಹಳ್ಳಿ ಗ್ರಾಮ ಪಂಚಾಯತ್ ಕಛೇರಿಗೆ ನೂತನ ಕಟ್ಟಡ
ಕೊಪ್ಪಳ: ತಾಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯತಿ ಕಛೇರಿಯ ನೂತನ ಕಟ್ಟಡ (ಮೊದಲನೆಯ ಮಹಡಿ) ವನ್ನು ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಕಿರ್ಲೋಸ್ಕರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್.ವಿ. ಗುಮಾಸ್ತೆಯವರು ಉದ್ಘಾಟಿಸಿದರು.
ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಕಿರ್ಲೋಸ್ಕರ್ ಕಾರ್ಖಾನೆಯು ಈ ಭಾಗದಲ್ಲಿ ಸುಮಾರು ೩೦ ವರ್ಷಗಳ ಹಿಂದೆ ಆರಂಭಗೊಂಡು, ಕೇವಲ ಉತ್ಪಾದನೆಗೆ ಸೀಮಿತಗೊಳ್ಳದೇ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ದಿ ಟ್ರಸ್ಟ್ನ್ನು ಸ್ಥಾಪಿಸಿ, ಸಿಎಸ್ಆರ್ ಅಡಿಯಲ್ಲಿ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಮತ್ತು ಸಮುದಾಯ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸವನ್ನು ಮಾಡಿದೆ. ಗ್ರಾಮಸ್ಥರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳ್ಳುವಲ್ಲಿ ಕಾರ್ಖಾನೆಯು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್.ವಿ. ಗುಮಾಸ್ತೆಯವರು ಮಾತನಾಡುತ್ತಾ, ಕಿರ್ಲೋಸ್ಕರ್ ಕಾರ್ಖಾನೆಯು ಸ್ಥಾಪಿತವಾದಾಗಿನಿಂದಲೂ ಈ ವಲಯದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದೆ, ಹಿಂದೆ ಗ್ರಾಮ ಪಂಚಾಯತ್ ಕಛೇರಿಗಾಗಿ ಅರ್ಧ ಎಕರೆ ಭೂಮಿಯನ್ನು ಖರೀದಿಸಿ ಪಂಚಾಯತಿಗೆ ಹಸ್ತಾಂತರಿಸಲಾಗಿತ್ತು. ಕಳೆದ ವರ್ಷ ಬೇವಿನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರುಗಳು ಹಾಗೂ ಗ್ರಾಮದ ಮುಖ್ಯಸ್ಥರು ಮನವಿಯನ್ನು ಸಲ್ಲಿಸಿದ್ದು, ಪ್ರಸ್ತುತ ಇರುವ ಗ್ರಾಮ ಪಂಚಾಯತಿ ಕಟ್ಟಡದ ಮೇಲ್ಮಹಡಿಯನ್ನು ಕಟ್ಟಿಕೊಡುವಂತೆ ಕೋರಿಕೊಂಡ ಹಿನ್ನಲೆಯಲ್ಲಿ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ದಿ ಟ್ರಸ್ಟ್ವತಿಯಿಂದ ೪೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕೆ. ರಾಜಶೇಖರ್ ಹಿಟ್ನಾಳ್, ಕಾರ್ಖಾನೆಯ ಹಿರಿಯ ಅಧಿಕಾರಿಗಳಾದ ಪಿ. ನಾರಾಯಣ, ಆರ್.ಎಸ್. ಶ್ರೀವತ್ಸನ್, ಸಿ.ರಮೇಶ್, ಎಮ್.ಜಿ. ನಾಗರಾಜ್, ತಹಸೀಲ್ದಾರ್ ವಿಠ್ಠಲ ಚೌಗಲೆ, ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಬೇವಿನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರುಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಇದ್ದರು.