ಹದಗೆಟ್ಟ ಗೊಂಡಬಾಳ ರಸ್ತೆಯ ದುರಸ್ತಿಯೂ ಇಲ್ಲ, ಡಾಂಬರೂ ಇಲ್ಲ !
ಬದಲಾವಣೆ ಸುದ್ದಿ, ಅಕ್ಷರ ಟಿವಿ ಕನ್ನಡ:
(ಮಾಹಿತಿ: ಪ್ರಭುರಾಜ ಜಾಹಗೀರದಾರ ಬದಲಾವಣೆ ಪತ್ರಿಕೆ ವರದಿಗಾರ)
ಹದಗೆಟ್ಟ ರಸ್ತೆ ಅನ್ನಬೇಕೋ ಹದಗೆಟ್ಟ ಮನಸ್ಥಿತಿ ಅನ್ನಬೇಕೋ ಒಟ್ಟಿನಲ್ಲಿ ಇಲ್ಲಿನ ರಸ್ತೆಯ ಗುಂಡಿಗಳಿಂದಾಗಿ ಜನ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಹೌದು ಇದು, ಕೊಪ್ಪಳ ತಾಲೂಕು ಹಳೆಗೊಂಡಬಾಳ ರಸ್ತೆಗಳ ಚಿತ್ತಾರಗೊಂಡ ರಸ್ತೆಯ ಚಿತ್ರಗಳು. ಹಲವು ವರ್ಷಗಳಿಂದ ಇಲ್ಲಿನ ರಸ್ತೆಗೆ ಡಾಂಬರ್ ಬಿದ್ದಿಲ್ಲ, ಇಲ್ಲಿನ ಜನರ ಸಂಕಷ್ಟ ನಿವಾರಣೆಗೆ ಯಾರೂ ಮುಂದೆ ಬರುತ್ತಿಲ್ಲ. ಶಾಸಕ ರಾಘವೇಂದ್ರ ಹಿಟ್ನಾಳ ಅವರು ಮೂರನೇ ಬಾರಿಗೆ ಆಯ್ಕೆಯಾಗಿರುವ ಕಾರಣ ಅವರ ಮೇಲೆ ಸಾಕಷ್ಟು ಒತ್ತಡಗಳು ಮತ್ತು ನಿರೀಕ್ಷೆಗಳಿವೆ.
ರಸ್ತೆಗಳು ಒಂದು ಕ್ಷೇತ್ರದ ಅಥವಾ ವ್ಯವಸ್ಥೆಯ ಅಭಿವೃದ್ಧಿಯ ಆತ್ಮ ಇದ್ದಂತೆ ಅದರಲ್ಲೂ ಗ್ರಾಮಗಳ ಅಭಿವೃದ್ಧಿಗೆ, ಗ್ರಾಮೀಣ ರಸ್ತೆಗಳು ಸುಸ್ಥಿತಿಯಲ್ಲಿದ್ದಷ್ಟು ಆ ಪ್ರದೇಶದ ಆರ್ಥಿಕ ಚಟುವಟಿಕೆಗಳಿಗೆ ಇಂಬು ನೀಡಿದಂತಾಗುತ್ತದೆ. ಆದರೆ, ಕೊಪ್ಪಳ ತಾಲೂಕು ಗೊಂಡಬಾಳ ಗ್ರಾಮೀಣ ರಸ್ತೆಗಳು, ಕೆಲ ಮುಖ್ಯ ರಸ್ತೆಗಳೂ ಹದಗೆಟ್ಟು ಹೋಗಿವೆ. ಕೆಟ್ಟ ದುಸ್ಥಿತಿಯಲ್ಲಿರುವ ರಸ್ತೆಗಳಿಂದಾಗಿ ಪ್ರಯಾಣಿಕರು ಹೈರಾಣಾಗಿದ್ದು, ದುರಸ್ತಿಗೆ ಕ್ರಮಕೈಗೊಳ್ಳದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರ್ಷಗಳಾದರೂ ಇಲ್ಲ ದುರಸ್ತಿ: ಅನೇಕ ಊರುಗಳಿಂದ ರಾತ್ರಿ ಪೂರ್ತಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮೂಲಕ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದರಿಂದ ರಸ್ತೆಗಳು ತೀರಾ ಹದೆಗೆಟ್ಟಿದ್ದರಿಂದ ಅನೇಕ ಗ್ರಾಮೀಣ ರಸ್ತೆಗಳು, ಕಿನ್ನಾಳ, ಸಿಂದೋಗಿ ಅಳವಂಡಿ, ಬೋಚನಹಳ್ಳಿ ಹಟ್ಟಿ ತಿಗರಿ ಮುಂತಾದ ಗ್ರಾಮಗಳ ರಸ್ತೆಗಳು ಕೆಟ್ಟು ಹೋಗಿದ್ದರಿಂದ ರಸ್ತೆಗಳಲ್ಲಿ ಪುನಃ ಅಲ್ಲಿ ವಾಹನ ಓಡಾಟ ದೊಡ್ಡ ಮರಳು ಗಾಡಿಗಳು ಸಂಚರಿಸುವುದರಿಂದ ಮುಂದೆ ಕಬ್ಬು ಕಟಾವು ಹಂಗಾಮಿನಲ್ಲಿ ಭಾರಿ ವಾಹನ ಸಂಚಾರ ಹೆಚ್ಚಾಗುತ್ತದೆ ಈಗಿರುವ ಕೆಟ್ಟ ರಸ್ತೆ ಕುಲಗೆಟ್ಟು ಹೋಗುವ ಸ್ಥಿತಿ ಇದೆ. ದಿನಕ್ಕೆ ನೂರಾರು ವಾಹನಗಳು ಕಬ್ಬು ಸಾಗಿಸುವುದರಿಂದ ಸಣ್ಣ ರಸ್ತೆಗಳು ಹದಗೆಡುತ್ತಿವೆ. ಅಲ್ಪ ಪ್ರಮಾಣದಲ್ಲಿ ಹಾಳಾದ ರಸ್ತೆಗಳಿಗೆ ತುರ್ತು ದುರಸ್ತಿ ಕೈಗೊಂಡರೆ ಕೆಲ ದಿನಗಳಾದರೂ ಸಂಚಾರಕ್ಕೆ ಯೋಗ್ಯವಾಗುತ್ತವೆ.
ಆದರೆ, ರಸ್ತೆಗಳು ಹದಗೆಟ್ಟು ವರ್ಷಗಳೇ ಆದರೂ ದುರಸ್ತಿ ಮಾತ್ರ ಆಗುತ್ತಿಲ್ಲ, ಎಲ್ಲ ರಸ್ತೆ ಹಾಳಾಗಿದೆ ಈ ಗ್ರಾಮಗಳ ಮೂಲಕ ಗರ್ಭಿಣಿಯರಿಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲೂ ಸಾಧ್ಯವಾಗುತ್ತಿಲ್ಲ. ವಾಹನಗಳ ಸಂಚಾರಕ್ಕೆ ರಸ್ತೆಗಳು ಯೋಗ್ಯವಾಗಿಲ್ಲ. ಕೂಡಲೆ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಈ ಗ್ರಾಮಗಳ ಜನರು ಆಗ್ರಹಿಸುತ್ತಿದ್ದಾರೆ.
ಗೊಂಡಬಾಳ ರಸ್ತೆಗಳು ಹಾಳಾಗಿದ್ದರಿಂದ ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೆ ಇದರಿಂದ ಗ್ರಾಮೀಣ ಜನರು ಸಮಸ್ಯೆ ಎದುರಿಸುವಂತಾಗಿದೆ. ಶಾಲೆ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಹೋಗೋಕೆ ಆಗ್ತಾ ಇಲ್ಲ. ಈ ಕುರಿತು ಜನಪ್ರತಿನಿಧಿಗಳು ಅಧಿಕಾರಿಗಳು ಗಮನಕ್ಕೆ ತಂದರು ಪ್ರಯೋಜನ ಆಗ್ತಾ ಇಲ್ಲ ಎಂದು ಗೊಂಡಬಾಳ ಗ್ರಾಮದ ಯುವಕರು ಜನಪ್ರತಿನಿಧಿಗಳ ವಿರುದ್ಧ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟ್ : ಈ ವಿಷಯವಾಗಿ ಕೊಪ್ಪಳ ಕ್ಷೇತ್ರದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರನ್ನು ಸಂಪರ್ಕಿಸಿ ಮಾತನಾಡಿಸಿದಾಗ, ಅವರು ಶೀಘ್ರವೇ ಕೆಕೆಆರ್ಡಿಬಿಯ ಮ್ಯಾಕ್ರೋ ಯೋಜನೆಯಲ್ಲಿ ಗೊಂಡಬಾಳ ರಸ್ತೆಯೂ ಸೇರಿದಂತೆ ಇನ್ನೂ ಮೂರು ಪ್ರಮುಖ ಗ್ರಾಮೀಣ ರಸ್ತೆಗಳನ್ನು ಸಂಪೂರ್ಣ ಗಟ್ಟಿಯಾಗಿ ನಿರ್ಮಿಸಲಾಗುವದು ಎಂದು ಹೇಳಿದ್ದಾರೆ.