ಬೆಂಕಿ ಅನಾಹುತಗಳ ಕ್ರಮಕ್ಕೆ ಸಿದ್ದಗೊಳ್ಳದ ನಗರಗಳು ಮತ್ತು ಮುನ್ಶಿಪಾಲ್ಟಿಗಳ ಅಲಕ್ಷ್ಯಗಳು!
ಬದಲಾವಣೆ ದಿನಪತ್ರಿಕೆ ಕಾಳಜಿ:
ಕೊಪ್ಪಳ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಬರುವ ವಾಣಿಜ್ಯ ಮಳಿಗೆಯಲ್ಲಿ ಸೋಮವಾರ ನಡೆದ ಅಗ್ನಿ ಅವಘಡ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ನಗರಗಳು ಮತ್ತು ರಾಜ್ಯದ ಅನೇಕ ನಗರ ಮತ್ತು ಪಟ್ಟಣಗಳು ಅನಾಹುತಗಳಿಗೆ, ಬೆಂಕಿಯಂತಹ ಅನಾಹುತಗಳನ್ನು ತಪ್ಪಿಸಿಕೊಳ್ಳುವದಕ್ಕೆ ಸಿದ್ದಗೊಳ್ಳದಿರುವದು ಮತ್ತು ಅಂಗಡಿ ಮುಂಗಟ್ಟುಗಳ ಪರವಾನಿಗೆ ಕೊಡುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಮತ್ತು ಉಪಕ್ರಮಗಳ ಬಗ್ಗೆ ಚಿಂತಿಸದಿರುವದರಿಂದ ಇಂತಹ ಸಂದರ್ಭಗಳನ್ನು ಎದುರಿಸುವ ಶಕ್ತಿ ಇಲ್ಲದಾಗಿದೆ.
ಹೌದು, ಜಿಲ್ಲಾ ಕೇಂದ್ರದಲ್ಲಿ ಆಗಾಗ ಇಂತಹ ಅನಾಹುತಗಳು ಸಂಭವಿಸಿವೆ, ಈಚಿನ ವರ್ಷದಲ್ಲಿ ಇಂತಹ ಸಂದರ್ಭ ಇದೇ ಮೊದಲ ಸಲ ಆಗಿದ್ದರಿಂದ ಇದು ತೀರಾ ಸಮಸ್ಯೆ ಎಂಬುದು ಅರಿವಿಗೆ ಬಂದಿದೆ. ಕೇಂದ್ರ ಬಸ್ ನಿಲ್ದಾಣದ ಕೂಗಳತೆಯಲ್ಲಿ ಸಂಭವಿಸಿದ ಈ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಬಲಿಯಾದ ಬಣ್ಣದ ಅಂಗಡಿ, ಪ್ಲೈವುಡ್ ಮತ್ತು ವೈನ್ ಸ್ಟೋರ್ಗಳು ಒಂದಕ್ಕೊಂದು ಅಕ್ಕಪಕ್ಕದಲ್ಲಿಯೇ ಇದ್ದವು, ಸುಡು ಬಿಸಿಲು ಮಧ್ಯಾಹ್ನ ಎರಡರ ಸುಮಾರಿಗೆ ಹೊತ್ತಿಕೊಂಡ ಬೆಂಕಿ ನೋಡನೋಡುತ್ತಲೇ ಅನೇಕ ಮಳಿಗೆಗಳನ್ನು ತನ್ನ ಕೆನ್ನಾಲಿಗೆಯಿಂದ ಸುಟ್ಟುಹಾಕಿತು.
ನಗರದಲ್ಲಿ ಇರುವ ಅಗ್ನಿ ಶಾಮಕ ದಳದ ವಾಹನ ಬಂದರೂ ಬೆಂಕಿ ಆರುವ ಬದಲಿಗೆ ಇನ್ನಷ್ಟು ಜೋರಾಯಿತು ಕೊನೆಗೆ ಕಾರ್ಖಾನೆಯ ಅಗ್ನಿ ನಂದಿಸುವ ವಾಹನ ಬಂದ ಮೇಲೆ ಬೆಂಕಿ ತಹಬದಿಗೆ ಬಂದಿದೆ. ಅದಕ್ಕೆ ಅಂತಹ ಶಕ್ತಿಶಾಲಿ ಮತ್ತು ಆಧುನಿಕ ತಂತ್ರಜ್ಞಾನವುಳ್ಳ ವಾಹನ ಅಗತ್ಯವಿದ್ದು ಸರಕಾರ ಈ ನಿಟ್ಟಿನಲ್ಲಿ ತುರ್ತಾಗಿ ಕ್ರಮವಹಿಸಿಬೇಕು, ಕನಿಷ್ಠ ಶಾಸಕ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತಮ್ಮ ಅನುದಾನಗಳಲ್ಲಿ ಅಂತಹ ವ್ಯವಸ್ಥೆ ಮಾಡುವ ಅಗತ್ಯವಿದೆ.
ಇನ್ನು ಮುನ್ಶಿಪಾಲಿಟಿಗಳು ನಗರ ವ್ಯಾಪ್ತಿಯೊಳಗೆ ಬರುವ ಎಲ್ಲಾ ಅಂಗಡಿಗಳಿಗೆ ಟ್ರೇಡ್ ಲೈಸೆನ್ಸ್ ನೀಡುತ್ತದೆ, ಅದಕ್ಕೆ ತೆರಿಗೆ ಮತ್ತು ಶುಲ್ಕ ಪಡೆಯುತ್ತದೆ, ಈ ವೇಳೆ ಬಾಡಿಗೆ ಕರಾರು ಅಥವಾ ಸ್ವಂತದ ಆಸ್ತಿಯ ದಾಖಲೆ ಜೊತೆಗೆ ಮಳಿಗೆಯ ತೆರಿಗೆ ರಶೀದಿ ಪಡೆಯುತ್ತದೆ ಆದರೆ ಇನ್ನಿತರ ವಿಷಯಗಳ ಕಡೆಗೆ ಗಮನ ಕೊಡುವದಿಲ್ಲ.
ಈಗ ಅದನ್ನು ಮಾಡಲೇಬೇಕಾದ ಸಂದರ್ಭ, ಆದ್ದರಿಂದ ಅಗ್ನಿ ನಂದಿಸಲು ಅವಶ್ಯಕವಿರುವ ಫೈರ್ ಎಷ್ಟಿಂಗವಿಷರ್ ಇಡುವಂತೆ ಮಾಡಬೇಕು, ವಿದ್ಯುತ್ ವ್ಯವಸ್ಥೆಯಲ್ಲಿ ಲೋಪವಿರದಂತೆ ಎಚ್ಚರಿಕೆವಹಿಸಬೇಕು, ವಿದ್ಯುತ್ ಸರಬುರಾಜು ಇಲಾಖೆಯ ಸಹಯೋಗದಲ್ಲಿ ವಿದ್ಯುತ್ ಕಂಬ, ಬೀದಿ ದೀಪ ಮುಂತಾದವುಗಳನ್ನು ಸರಿಯಗಿ ಇರುವಂತೆ ಮಾಡಬೇಕು. ಬೆಂಕಿ ಹತ್ತಿಕೊಳ್ಳುವ ಕಸ, ವಸ್ತುಗಳನ್ನು ಸಾಧ್ಯವಾದಷ್ಟು ತುರ್ತಾಗಿ ಕಸವಿಲೇವಾರಿ ಘಟಕ್ಕೆ ಸಾಗಿಸಬೇಕು, ಮತ್ತು ಕಸ ವಿಲೇವಾರಿ ಘಟಕಗಳಲ್ಲಿ ಸಹ ಆಗಾಗ ಬೆಂಕಿ ಹತ್ತಿಕೊಂಡು ಅಪಾರ ಪ್ರಮಾಣದ ವಾಯು ಮಾಲಿನ್ಯವಾಗುತ್ತಿದ್ದು ಅದಕ್ಕೂ ಸರಿಯಾದ ಕ್ರಮ ತೆಗೆದುಕೊಳ್ಳಬೇಕು.
ಇನ್ನು ವಾಣಿಜ್ಯ ಮಳಿಗೆಗಳ ಕಟ್ಟಡ ಪರವಾನಿಗೆ ಮತ್ತು ಈಗಾಗಲೇ ನಿರ್ಮಾಣವಾಗಿರುವ ವಾಣಿಜ್ಯ ಮಳಿಗೆಗಳಲ್ಲಿ ಮೂಳಭೂತ ಸೌಕರ್ಯ ಇರುವಂತೆ ನೋಡಿಕೊಳ್ಳಬೇಕು. ಅದರಲ್ಲಿ ಮೊದಲು ಸಾರ್ವಜನಿಕ ಶೌಚಾಲಯ, ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಇರಬೇಕು ಇಲ್ಲವಾದಲ್ಲಿ ಅದರಿಂದ ಆಗುವ ಸಂಚಾರ ಅಸ್ಥವ್ಯಸ್ಥತೆಗೆ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು, ಈಗಿರುವ ಅಂತಹ ಎಲ್ಲ ಮಳಿಗೆಗಳಿಗೆ ಬೀಗ ಜಡಿಯಬೇಕು.
ನಗರಸಭೆ ಮತ್ತು ಪಟ್ಟಣ ಪಂಚಾಯತಿಗಳು ಈ ಎಲ್ಲಾ ಕ್ರಮಕ್ಕೆ ತುರ್ತಾಗಿ ಮುಂದಾದರೆ ಮಾತ್ರ ಇಂತಹ ಪರಿಸ್ಥಿತಿ ಬರದಂತೆ ತಡೆಯಬಹುದು. ಈಗ ಕೊಪ್ಪಳದ ಘಟನೆಯಲ್ಲಿ ಕೊಟ್ಯಾಂತರ ರುಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಭಸ್ಮವಾಗಿವೆ ಜೊತೆಗೆ ಶೆಡ್ಗಳು ಸಹ ಸಂಪೂರ್ಣವಾಗಿ ನಾಶವಾಗಿವೆ. ಸ್ಥಳಕ್ಕೆ ಶಾಸಕರು ಆಗಮಿಸಿದ್ದು ಸಾಧ್ಯವಾದಷ್ಟು ಪರಿಹಾರದ ಭರವಸೆನೀಡಿದ್ದಾರೆ, ಆದರೆ ಇಂತಹ ಅಂಗಡಿಗಳು ಸಾಧ್ಯವಾದಷ್ಟು ಇನ್ಶುರೆನ್ಸ್ ಮಾಡಿದ್ದರೆ ಸ್ವಲ್ಪಮಟ್ಟಿಗೆ ಸಮಸ್ಯೆ ಬಗೆಹರಿಯತಿತ್ತು ಎಂಬ ಮಾತು ಇದ್ದು, ಅಂಗಡಿ ಮಾಲಿಕರು ಅದರ ಕಡೆಗೆ ಗಮನ ಕೊಡಬೇಕು ಎಂಬುದು ಪತ್ರಿಕೆಯ ಕಾಳಜಿ.