ಗ್ಯಾರಂಟಿ ಜೊತೆಗೆ ಶಿವ-ರಾಮಯ್ಯ ವಾರಂಟಿ ಇದೆ : ಜ್ಯೋತಿ
ಬದಲಾವಣೆ ದಿನಪತ್ರಿಕೆ: ಅಕ್ಷರ ಟಿವಿ :
ಕೊಪ್ಪಳ: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ ಬಡ ಮತ್ತು ಮಧ್ಯಮ ವರ್ಗಕ್ಕೆ ಆಸರೆಯಾಗಿದ್ದು ಗ್ಯಾರಂಟಿಯೊಂದಿಗೆ ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯ ಅವರ ವಾರಂಟಿ ಇದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ ಪ್ರಾಧಿಕಾರ ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ ಹೇಳಿದರು.
ಅವರು ಭಾಗ್ಯನಗರ ೬ನೇ ವಾರ್ಡಿನಲ್ಲಿ ಕಾಂಗ್ರೆಸ್ ಬಡಜನರಿಗಾಗಿ ಮಾಡಿರುವ ಅನ್ನಭಾಗ್ಯ, ಯುವನಿಧಿ, ಗೃಹಭಾಗ್ಯ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಪರವಾಗಿ ಪ್ರಚಾರ ನಡೆಸಿ ಮಾತನಾಡಿದರು.
ಬಿಜೆಪಿ ಭ್ರಷ್ಟರು, ಅಂದಾಭಿಮಾನ ಹಾಗೂ ಧರ್ಮದ ಮದ ಹಚ್ಚಿಕೊಂಡ ಜನ ಅದನ್ನು ಬಿಟ್ಟಿ ಭಾಗ್ಯ ಎಂದು ತೆಗಳುವ ಮೂಲಕ ಬಡಜನರಿಗೆ ವ್ಯಂಗ್ಯ ಮಾಡುತ್ತಿದ್ದಾರೆ, ಇಂತಹ ಒಂದು ಯೋಜನೆ ಮಾಡದೇ, ಉದ್ಯೋಗ ಕೊಡದೇ ದೇಶದ ಸಾಲವನ್ನು ಕೇವಲ ಹತ್ತು ವರ್ಷದಲ್ಲಿ ನಾಲ್ಕು ಪಟ್ಟು ಅಂದರರೆ ೭೦ ವರ್ಷದಲ್ಲಿ ಇದ್ದ ೫೪ ಲಕ್ಷ ಕೋಟಿ ಸಾಲವನ್ನು ೨೦೭ ಕೋಟಿಗೆ ತಂದು ನಿಲ್ಲಿಸಿದ ಕೀರ್ತಿ ಮೋದಿ ಸರಕಾರಕ್ಕೆ ಸಲ್ಲುತ್ತದೆ, ಅವರು ಹೇಳಿರುವ ಒಂದೂ ಯೋಜನೆಯಿಂದ ಜನರಿಗೆ ಅನುಕೂಲ ಆಗುವದಿಲ್ಲ, ಶ್ರೀಮಂತ ಕಾರ್ಪೋರೇಟ್ ಕುಳಗಳಿಗೆ ದಾಸರಾದ ಅವರಿಗೆ ಬಡವರ ಕಷ್ಟ ಅರ್ಥವಾಗುವದಿಲ್ಲ. ಯುವಜನರಿಗೆ ಕೆಲಸ ಇಲ್ಲದೇ ಪರದಾಡುವ ಸ್ಥಿತಿ ಇದೆ, ಉದ್ಯೋಗ ನಷ್ಟ ದೇಶದಲ್ಲಿ ಎಂದೆಂದಿಗಿಂತ ಅಧಿಕವಾಗಿದೆ.
ಬಿಜೆಪಿ ಅವರು ರಾಮಮಂದಿರ, ಪಾಕಿಸ್ತಾನ, ಮುಸ್ಲಿಂ ಎಂದು ಮತ ಕೇಳಲು ಬಂದರೆ ಸರಿಯಾಗಿ ಉತ್ತರಿಸಿ, ಕಾಂಗ್ರೆಸ್ ಕಟ್ಟಿದ ದೇಶವನ್ನು ಮಾರಾಟ ಮಾಡಿದ ಸುಳ್ಳು ದೇಶಭಕ್ತರನ್ನು ಸೋಲಿಸುವ ಮೂಲಕ ಪಾಠ ಕಲಿಸಿ, ದೇಶದ ಉಳಿವಿಗಾಗಿ ಕಾಂಗ್ರೆಸ್ಗೆ ಮತ ಕೊಡಿ ಎಂದು ಮನೆ ಮನೆಗೆ ತೆರಳಿ ವಿನಂತಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯೆ, ಗ್ಯಾರಂಟಿ ಪ್ರಾಧಿಕಾರ ಸದಸ್ಯರಾದ ಸವಿತಾ ಗೋರಂಟ್ಲಿ ನೇತೃತ್ವವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಮಂಜುನಾಥ ಗೊಂಡಬಾಳ, ಅಶೋಕ ಗೋರಂಟ್ಲಿ, ಯಶೋಧ ಮರಡಿ, ಸುಮಂಗಲಾ ನಾಯಕ್, ಶಿಲ್ಪಾ ಗುಡ್ಲಾನೂರ, ಜಯಶ್ರೀ, ಗವಿಸಿದ್ದಪ್ಪ ಹಂಡಿ, ಬೋರಮ್ಮ ಇತರರು ಇದ್ದರು.