ನಾಟಕ ಅಕಾಡಮಿಗೆ ಹೆಸರು ತನ್ನಿ, ಈ ಭಾಗಕ್ಕೆ ಅವಕಾಶ ನೀಡಿ – ಜ್ಯೋತಿ ಮನವಿ
ಕೊಪ್ಪಳ : ಕಾಂಗ್ರೆಸ್ ಸರಕಾರದಲ್ಲಿ ಉತ್ತರ ಕರ್ನಾಟಕದ ಬಹುತೇಕ ಕವಿ, ಕಲಾವಿದ, ಸಾಹಿತಿ, ಚಿಂತಕರಿಗೆ ವಿವಿಧ ಅಕಾಡಮಿಗಳಲ್ಲಿ ಅವಕಾಶ ನೀಡುವ ಮೂಲಕ ಉತ್ತರ ಕರ್ನಾಟಕದ ಬಹುದಿನಗಳ ಆಸೆಗೆ ನೀರೆರೆದಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ ಪ್ರಾಧಿಕಾರ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಸಂತಸ ವ್ಯಕ್ತಪಡಿಸಿದ್ದಾರೆ.
ಅವರು ನಗರದಲ್ಲಿ ನಾಟಕ ಅಕಾಡಮಿಗೆ ಸದಸ್ಯರಾಗಿ ನೇಮಕಗೊಂಡ ಸಮೀಪದ ಬಹೂದ್ದರಬಂಡಿ ಗ್ರಾಮದ ಹಿರಿಯ ರಂಗಕರ್ಮಿ, ಸಂಘಟಕ ಚಾಂದಪಾಶಾ ಕಿಲ್ಲೇದಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಿ ಮಾತನಾಡಿದರು.
ಚಾಂದಪಾಶಾ ಕಿಲ್ಲೆದಾರ್ ಅವರು ೧೮ನೇ ವರ್ಷದಲ್ಲಿಯೇ ಗುರಿ ಸಾಧಿಸಿದ ಗಂಡು ನಾಟಕದಲ್ಲಿ ಮೊದಲ ಬಾರಿಗೆ ರಂಗಪ್ರವೇಶ ಮಾಡಿದರು, ನಂತರ ೧೯೮೨ ರಲ್ಲಿ ಆಶಾ ಲತಾ ನಾಟಕದಲ್ಲಿ ಕಥಾ ನಾಯಾಕನ ಪಾತ್ರ ಮಾಡಿದ್ದು ಅದು ಸುಮಾರು ೪೭ ಪ್ರಯೋಗಗಳನ್ನು ಕಂಡಿದೆ, ಕೆಟ್ಟ ಮೇಲೆ ಬುದ್ಧಿ ಬಂತು ನಾಟಕದಲ್ಲಿ ಅಮರೇಶನ ಪಾತ್ರ ಮಾಡಿದ್ದರು, ಬಾಳು ಬೆಳಗಿದ ಜ್ಯೋತಿ ಇನ್ನೂ ಅನೇಕ ನಾಟಕಗಳಲ್ಲಿ ಪಾತ್ರ ಮಾಡಿದ್ದರು. ಹುಚ್ಚ ಹಚ್ಚಿದ ಕಿಚ್ಚು, ಕುರುಬ ಹಚ್ಚಿದ ಕುಂಕುಮ ಸೇರಿ ಅನೇಕ ನಾಟಕಗಳಿಗೆ ನಿರ್ದೇಶನ ಮಾಡಿದ್ದು ಅಲ್ಲದೇ ಯಾರದೋ ತಪ್ಪು ಯಾರಿಗೋ ಶಿಕ್ಷೆ ನಾಟಕವನ್ನು ರಚಿಸಿ ನಿರ್ದೇಶನ ಮಾಡಿದ್ದು ಹೆಮ್ಮೆಯ ಸಂಗತಿ ಅವರು ಇಂದು ನಾಟಕ ಅಕಾಡಮಿಗೆ ಸದಸ್ಯರಾಗಿದ್ದಾರೆ.
ಚಾಂದಪಾಶಾ ಕಿಲ್ಲೆದಾರ್ ಅವರು ಸಂಘಟನೆಯಲ್ಲಿ ಇದ್ದು, ರಾಜಕೀಯದಲ್ಲೂ ಚಾಣಾಕ್ಷರಾಗಿದ್ದಾರೆ, ಉತ್ತಮ ಸ್ನೇಹ ಜೀವಿಯಾಗಿರುವ ಚಾಂದಪಾಶಾ ಅವರು ನಾಟಕ ಅಕಾಡಮಿಗೆ ಕೀರ್ತಿ ತರಲಿ ಈ ಭಾಗಕ್ಕೆ ಒತ್ತು ಕೊಟ್ಟು ನಿಜವಾದ ರಂಗಭೂಮಿಗೆ ಕೆಲಸ ಮಾಡುವವರನ್ನು ಗುರುತಿಸಿ ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿದ ಚಾಂದಪಾಶಾ ಅವರು, ಕೈಲಾದ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವ ಮತ್ತು ಅವಕಾಶ ಕೊಟ್ಟ ಸರಕಾರಕ್ಕೆ ಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಶ್ರೀನಿವಾಸ ಪಂಡಿತ್, ಮಾನವಿ ಪಾಶಾ, ಸುಮಂಗಲಾ ಗಿಣಗೇರಿ ಇತರರು ಇದ್ದರು.