ಕಾಡಾ ಅಧ್ಯಕ್ಷ ಹಸನ್ಸಾಬ್ರಿಗೆ ಸಂವಿಧಾನ ಪೀಠಿಕೆಯ ಸನ್ಮಾನ
Aksharatvnewsdesk
ಕೊಪ್ಪಳ : ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯ ಕಾರ್ಯಾಲಯದಲ್ಲಿ ಕುಷ್ಟಗಿ ಮಾಜಿ ಶಾಸಕ ನೂತನ ಕಾಡಾ ಅಧ್ಯಕ್ಷ ಹಸನ್ಸಾಬ್ ದೋಟಿಹಾಳ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ ಪ್ರಾಧಿಕಾರ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಕಾಡಾ ಮುನಿರಾಬಾದಿಗೆ ಮೊದಲ ಸಲ ಮುಸ್ಲಿಂ ಮುಖಂಡರಿಗೆ ಒಲಿದಿದ್ದು ಅವರನ್ನು ಸಂವಿಧಾನ ಪೀಠಿಕೆ ಇರುವ ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ, ಚನ್ನಮ್ಮ ಮತ್ತು ಕನಕದಾಸರ ಭಾವಚಿತ್ರದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಸನ್ಸಾಬರ ಆಯ್ಕೆ ಕಾಂಗ್ರೆಸ್ ಸರಕಾರದ ನಿಜವಾದ ಸಬ್ಕಾ ಸಾಥ್ ಸಬ್ಕಾ ವಿಕಾಸ ಆಗಿದೆ ಎಂದು ಜ್ಯೋತಿ ಗೊಂಡಬಾಳ ಹೇಳಿದರು. ಬಿಜೆಪಿ ಕೇವಲ ರಾಜಕೀಯಕ್ಕಾಗಿ ಧರ್ಮದ ಬಗ್ಗೆ ಮಾತನಾಡುತ್ತಿದ್ದು ಕಲಿಯುಗದ ಅಂತ್ಯಕ್ಕೆ ಸಾಕ್ಷಿಯಾಗಿದೆ, ಧರ್ಮವನ್ನು ಮುಂದಿಟ್ಟು ಜನರ ದಿಕ್ಕು ತಪ್ಪಿಸುವದರ ಜೊತೆಗೆ ಅವರನ್ನು ಅನ್ನಕ್ಕಾಗಿ ಹಪಾಹಪಿಸುವಂತೆ ಮಾಡುತ್ತಿದೆ, ಉದ್ಯೋಗವಿಲ್ಲ, ಸ್ವಂತ ಉದ್ಯೋಗ ಮಾಡಲು ಆಗದ ಸ್ಥಿತಿ ಇದೆ, ಎಲ್ಲಾ ಉದ್ಯಮಗಳಲ್ಲಿ ಗುಜರಾತಿಯ ಇಬ್ಬರು ಪ್ರಧಾನಿ ಗೆಳೆಯರೇ ಪಾರುಪಥ್ಯ ಹೊಂದಿದ್ದು ಸಾಮಾನ್ಯ ಜನರು ಬದುಕಲು ಆಗಲ್ಲ ಎಂದರು.
ಹಸನ್ಸಾಬ್ ದೋಟಿಹಾಳರು ಸಭ್ಯ ಮತ್ತು ದಿಟ್ಟ ರಾಜಕಾರಣಿ, ಸರ್ವ ಸಮಾಜಕ್ಕೂ ಒಗ್ಗುವ ಮನೋಭಾವ ಹೊಂದಿದ್ದಾರೆ, ಜೊತೆಗೆ ಅವರು ಕಾಂಗ್ರೆಸ್ನ ಸ್ಟಾರ್ ಕ್ಯಾಂಪೇನರ್ ಆಗಿದ್ದು ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ವಿಶ್ವಾಸ ಇದೆ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಲೋಕಸಭಾ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಾಲತಿ ನಾಯಕ್, ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮಾಜಿ ಜಿ. ಪಂ. ಸದಸ್ಯ ಗೂಳಪ್ಪ ಹಲಗೇರಿ, ನಾಟಕ ಅಕಾಡಮಿ ಸದಸ್ಯ ಚಾಂದಪಾಶಾ ಕಿಲ್ಲೆದಾರ್, ಸುಮಂಗಲಾ ಶೇಖರ್ ಗಿಣಗೇರಿ, ಗಂಗಮ್ಮ, ಶ್ರೀನಿವಾಸ ಪಂಡಿತ್, ಮಾನವಿ ಪಾಶಾ ಇತರರು ಇದ್ದರು.