- ಅಕ್ಷರ ಟಿವಿ ನ್ಯೂಸ್, ಕೊಪ್ಪಳ: ತಾಲೂಕಿನ ಕೆರೆಹಳ್ಳಿ ಗ್ರಾಮದ ಸಮೀಪ ಇರುವ ಐತಿಹಾಸಿಕ ತಿರುಗಲ್ ತಿಮ್ಮಪ್ಪ ದೇಗುಲ ಮತ್ತು ಕೊಳ್ಳಿನ ಕೆರೆ ಅಭಿವೃದ್ಧಿಪಡಿಸಿ ತಿಮ್ಮಪ್ಪನ ಭಕ್ತರಿಗೆ, ಪ್ರವಾಸಿಗರಿಗೆ ಮತ್ತು ರೈತ ಸಂಕುಲಕ್ಕೆ ನೆರವಾಗಬೇಕೆಂದು ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ತೇರಿನ ಹನುಮಂತರಾಯ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಸರ್ಕಾರಕ್ಕೆ ಮನವಿ ಮಾಡಿದೆ.
ಟ್ರಸ್ಟ್ ಅಧ್ಯಕ್ಷ ವೀರಣ್ಣ ಕೋಮಲಾಪುರ, ಪ್ರಧಾನ ಕಾರ್ಯದರ್ಶಿ ವಸಂತ್ ಕೆರೆಹಳ್ಳಿ, ಖಜಾಂಚಿ ಪರಶುರಾಮ್ ಇವರು ಜಿಲ್ಲಾಡಳಿತ ಮತ್ತು ತಾಲೂಕು ದಂಡಾಧಿಕಾರಿಗಳನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಿದ್ದಾರೆ. ಮನವಿ ಪತ್ರದಲ್ಲಿ ಅವರು ತಿಳಿಸಿರುವಂತೆ ಐತಿಹಾಸಿಕ ತಿರುಗಲ್ ತಿಮ್ಮಪ್ಪ ದೇಗುಲ ಕಳೆದ 650 ವರ್ಷದ ಹಿಂದೆಯೇ ನಿರ್ಮಾಣವಾಗಿದೆ. ಶೈವ ಮತ್ತು ವೈಷ್ಣವ ಪರಂಪರೆ ಇಲ್ಲಿ ಊರ್ಜಿತಗೊಂಡಿರುವ ಕುರುಹುಗಳಿವೆ. ಶಿವಶರಣರು ಮತ್ತು ಹರಿದಾಸರು ಈ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುವ ಬಗ್ಗೆ ಐತಿಹಾಸಿಕ ದಾಖಲೆಗಳಿವೆ. ಇಲ್ಲಿನ ಕೋಟೆ, ಮಂಟಪಗಳು, ತಿರುಗಲ್ ತಿಮ್ಮಪ್ಪ ದೇವಾಲಯ, ಅಂದಿನ ಜನರ ವಾಸಸ್ಥಾನದ ಮನೆಗಳಿರುವ ಕುರುಹುಗಳಿವೆ. ಗಂಡುಗಲಿ ಕುಮಾರರಾಮ, ಕಂಪಿಲರಾಯನ ಆಡಳಿತಾವಧಿಯಲ್ಲಿ ಈ ದೇವಾಲಯ ಮತ್ತು ಸ್ಮಾರಕಗಳು ನಿರ್ಮಾಣಗೊಂಡಿವೆ. ಕಾಲಗರ್ಭದಲ್ಲಿ ಇವು ಅಳಿವಿನ ಅಂಚಿಗೆ ತಲುಪಿದ್ದು, ಮುಂದಿನ ಪೀಳಿಗೆಗೆ ಉಳಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಚಿವ ಪಾಟೀಲ್ ಸೇವೆ ಶ್ಲಾಘನೀಯ:
ರಾಜ್ಯ ಪ್ರವಾಸೋದ್ಯಮ ಸಚಿವರು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆಯ ಮಂತ್ರಿಗಳೂ ಆಗಿರುವ ಹಿರಿಯ ಸಚಿವ ಹೆಚ್.ಕೆ.ಪಾಟೀಲ್ ಅವರು ಈಗಾಗಲೇ ರಾಜ್ಯದಾದ್ಯಂತ ಸಂಚರಿಸಿ ಇಂತಹ 25 ಸಾವಿರ ಸ್ಮಾರಕಗಳನ್ನು ಗುರುತಿಸಿದ್ದಾರೆ. ಐತಿಹಾಸಿಕ ತಾಣಗಳನ್ನು ಉಳಿಸಿ, ಬೆಳೆಸುವ ಇವರ ಸೇವೆ ನಿಜಕ್ಕೂ ಶ್ಲಾಘನೀಯವಾದುದು. ಸಚಿವ ಪಾಟೀಲರು ಇನ್ನೂ 5 ಸಾವಿರ ಸ್ಮಾರಕಗಳನ್ನು ಗುರುತಿಸಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಿರುಗಲ್ ತಿಮ್ಮಪ್ಪ ಪರಿಸರದಲ್ಲಿ ಅಂದು ಜನಜೀವನ ಉಚ್ಛ್ರಾಯಸ್ಥಿತಿಯಲ್ಲಿತ್ತು ಎಂದು ಹೇಳಿಕೊಳ್ಳುವುದಕ್ಕೆ ಸಾಕಷ್ಟು ಪುರಾವೆಗಳಿವೆ. ರಾಜ್ಯ ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿತ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಈ ದೇವಾಲಯ ಸಂಕಿರಣವನ್ನು ಅಭಿವೃದ್ಧಿಪಡಿಸಬೇಕೆಂದೂ ಅವರು ಒತ್ತಾಯಿಸಿದ್ದಾರೆ.
ಕೆರೆ ಅಭಿವೃದ್ಧಿಪಡಿಸಿ:
ಐತಿಹಾಸಿಕ ಕೊಳ್ಳಿನ ಕೆರೆ ತಿರುಗಲ್ ತಿಮ್ಮಪ್ಪ, ಶ್ರಿ ಲಕ್ಷ್ಮೀದೇವಿ, ಶ್ರೀ ಅಂದಿಗಾಲೀಶ ಗುಡ್ಡದ ನಡುವೆ ಇದ್ದು ಈ ಕೆರೆ ಅಭಿವೃದ್ಧಿಪಡಿಸಬೇಕು. ಪುರಾತನ ಕಾಲದಿಂದಲೂ ಇಲ್ಲಿನ ಜನ, ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರುಣಿಸಿದ್ದ ಈ ಕೆರೆ ದುಃಸ್ಥಿತಿಯಲ್ಲಿದೆ. ಪ್ರಾಚೀನ ಕಾಲದ ಜನರು ಇಲ್ಲಿ ಕೆರೆಗೆ ಒಡ್ಡು ನಿರ್ಮಿಸಿ ಕೆರೆಯನ್ನು ದೈವೀಕವಾಗಿ ಪೋಷಣೆ ಮಾಡಿಕೊಂಡು ಬಂದಿದ್ದರು. ಈ ಕೆರೆಯನ್ನು ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಜ ತಂಗಡಗಿ ಕೆರೆಯಲ್ಲಿ ನೀರು ನಿಲ್ಲಿಸಲು ಬೃಹತ್ ಗೋಡೆ ನಿರ್ಮಾಣ ಮಾಡಿದ್ದರು. ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ಕೆರೆಯಲ್ಲಿ ನೀರು ಸಂಗ್ರಹಗೊಳ್ಳುತ್ತಿಲ್ಲ. ಕೆರೆಯ ಸುತ್ತಲೂ ಕಾವಲು ಗೋಪುರಗಳಿವೆ. ಅವುಗಳನ್ನು ಧ್ವಂಸಗೊಳಿಸಲಾಗಿದೆ. ಒಂದೊಮ್ಮೆ ಇಡೀ ವಿಶ್ವವೇ ಬೆರಗಾಗುವಂತೆ ವಿಜಯನಗರ ಸಾಮ್ರಾಜ್ಯ ನಿರ್ಮಾಣ ಮಾಡಿದ್ದ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಇಲ್ಲಿ ದೇವಾಲಯಗಳು, ಸ್ಮಾರಕಗಳು ಮತ್ತು ಕೆರೆಗಳನ್ನು ನಿರ್ಮಾಣ ಮಾಡಲಾಗಿತ್ತು ಎನ್ನುವುದು ವೇದ್ಯ. ಕಾರ್ಖಾನೆಗಳ ಹಾವಳಿ, ಕಲ್ಲು ಕ್ವಾರಿಗಳ ಕಪಿಮುಷ್ಟಿಯಲ್ಲಿ ಇಲ್ಲಿನ ಪರಿಸರ, ಐತಿಹಾಸಿಕ ಸ್ಮಾರಕಗಳು, ಜನ-ಜಾನುವಾರುಗಳಿಗೆ ಉಪಯೋಗವಾಗಬಲ್ಲ ಕರೆಕುಂಟೆಗಳು ನಾಶವಾಗುವ ಭೀತಿ ಇದೆ. ಹೀಗಾಗಿ ಮುಂದಿನ ಜನಾಂಗದ ಭವಿಷ್ಯತ್ತಿಗಾಗಿ ಇಲ್ಲಿನ ದೇವಾಲಯಗಳು, ಸ್ಮಾರಕಗಳನ್ನು ಉಳಿಸಿ, ಬೆಳೆಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸಿಎಂ., ಪಿಎಂ ಅವರಿಗೂ ಪತ್ರ ಬರೆಯಲಾಗಿತ್ತು:
ಈ ಹಿಂದೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೂ ಇಲ್ಲಿನ ಸ್ಮಾರಕಗಳು, ದೇಗುಲಗಳು, ಕೆರೆಗಳನ್ನು ಅಭಿವೃದ್ಧಿಪಡಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಮೋದಿ ಅವರು ಅಯೋಧ್ಯೆ ರಾಮಮಂದಿರ ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದಿರುವ ವೀರಣ್ಣ ಕೋಮಲಾಪುರ ಅವರು, ಇದೀಗ ಸಿದ್ಧರಾಮಯ್ಯನವರು ರಾಜ್ಯದ 100 ರಾಮ ಮಂದಿರಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದಾರೆ. ಇದಕ್ಕಾಗಿ ರೂ.100 ಕೋಟಿ ಅನುದಾನ ಮೀಸಲಿಡುವ ಭರವಸೆ ನೀಡಿದ್ದಾರೆ. ತಿರುಗಲ್ ತಿಮ್ಮಪ್ಪ ವೈಷ್ಣವ ಮತ್ತು ಶೈವ ಸಂಗಮದ ತಾಣವಾಗಿದ್ದು ರಾಮನ ಬಂಟ ತೇರಿನ ಹನುಮಂತ ಇಲ್ಲಿ ನೆಲೆ ನಿಂತಿದ್ದಾನೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರವಾಸೋದ್ಯಮಕ್ಕೆ ಎಲ್ಲ ಅರ್ಹತೆ ಹೊಂದಿರುವ, ಭಕ್ತರಿಗೆ ಭಕ್ತಿ ಸಂಪನ್ನವಾದ ಇಲ್ಲಿನ ಸ್ಥಳವನ್ನು ಅಭಿವೃದ್ಧಿಪಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಆರ್ಚ್ ಮತ್ತು ರಸ್ತೆ ನಿರ್ಮಿಸಿ:
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶೈವ ಮತ್ತು ವೈಷ್ಣವ ಆರಾಧಕರಾಗಿದ್ದಾರೆ. ಎಲ್ಲ ಧರ್ಮಗಳನ್ನೂ ಪ್ರೀತಿಸುವ ಇವರು ನಮ್ಮ ಹೆಸರುಗಳಲ್ಲೇ ರಾಮ ಮತ್ತು ಶಿವನಿದ್ದಾನೆ ಎಂದಿದ್ದಾರೆ. ನಾವೂ ಕೂಡ ರಾಮನ ಮತ್ತು ಹನುಮನ ಭಕ್ತರು ಎಂದು ರಾಜ್ಯದ ಜನತೆಯ ಮುಂದೆ ಹೇಳಿಕೊಂಡಿದ್ದಾರೆ. ಸಿಎಂ ಮತ್ತು ಡಿಸಿಎಂ ನಿಜವಾಗಿಯೂ ರಾಮ ಮತ್ತು ಶಿವನ ಭಕ್ತರಾಗಿದ್ದರೆ, ಕೆರೆಹಳ್ಳಿ ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹನುಮಂತದೇವರ ಬೃಹತ್ ಪ್ರತಿಮೆ ನಿಲ್ಲಿಸಬೇಕು. ಇಲ್ಲಿಂದ ತಿರುಗಲ್ ತಿಮ್ಮಪ್ಪ ಬೆಟ್ಟ ಏರಲು ಸುಸಜ್ಜಿತವಾದ ರಸ್ತೆ ನಿರ್ಮಾಣ ಮಾಡಬೇಕು. ರೈತರ ಮತ್ತು ಮುಂದಿನ ಪೀಳಿಗೆ ಬಗ್ಗೆ ಕಿಂಚಿತ್ತೂ ಕಾಳಜಿ ಇದ್ದುದೇ ಆದರೆ ಪ್ರಥಮ ಹಂತದಲ್ಲಿಯೇ ಇಲ್ಲಿನ ತಿರುಗಲ್ ತಿಮ್ಮಪ್ಪ ದೇಗುಲ ಅಭಿವೃದ್ಧಿಪಡಿಸಿ, ಕೊಳ್ಳಿನ ಕೆರೆಯಲ್ಲಿ ನೀರು ಸಂಗ್ರಹಿಸುವಂತಹ ಕಾಯಕ ಮಾಡಿದರೆ ನಿಜಕ್ಕೂ ನೀವು ಹಿಂದುಗಳೇ. ಇಲ್ಲವೇ ಹೋದರೆ ಬೂಟಾಟಿಕೆಯ ಹೇಳಿಕೆ ನೀಡುವ ಕೇವಲ ರಾಜಕಾರಣಿಗಳು ಮಾತ್ರ ಆಗತ್ತೀರಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
—–