ಅಕ್ಷರ ಟಿವಿ ನ್ಯೂಸ್, ಗಂಗಾವತಿ : ನಗರದ ಉಪ ವಿಭಾಗ ಆಸ್ಪತ್ರೆಯು ಯಾವುದೇ ಕಾರ್ಪೊರೇಟ್ ಆಸ್ಪತ್ರೆಗೆ ನಾವೇನು ಕಡಿಮೆಯಿಲ್ಲ ಎಂದು 2022-23ನೇ ಸಾಲಿಗೆ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೀಡಲ್ಪಡುವ ‘ಕಾಯಕಲ್ಪ’ ಪ್ರಶಸ್ತಿಯನ್ನು ಸತತವಾಗಿ ಮೂರನೇ ಭಾರಿಗೆ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ ಗೌರವಕ್ಕೆ ಭಾಜನವಾಗಿದೆ.
ಸತತ ಮೂರು ವರ್ಷ ಹ್ಯಾಟ್ರಿಕ್ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡ ರಾಜ್ಯದ ಮೊದಲ ಆಸ್ಪತ್ರೆ ಎಂಬ ದಾಖಲೆ ಗಂಗಾವತಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸರ್ಕಾರಿ ಆಸ್ಪತ್ರೆಗಳಿಗೆ ನೀಡುವ ಈ ಪ್ರಶಸ್ತಿಯನ್ನು ಆರೋಗ್ಯ ಸಂಸ್ಥೆಗಳಲ್ಲಿನ ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯದಂತ ಮಾನದಂಡದಲ್ಲಿ ನೀಡಲಾಗುತ್ತಿದೆ.
ಮಂಗಳವಾರ ಮೈಸೂರಿನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಈಶ್ವರ ಶಿ.ಸವಡಿ ಅವರಿಗೆ ಪ್ರಶಸ್ತಿ ನೀಡಿದರು.
ಗಂಗಾವತಿಯ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಖಾಸಗಿ ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ಸಿಗುವಂತಹ ಅತ್ಯಾಧುನಿಕ ತಂತ್ರಜ್ಞಾನದ ಗುಣಮಟ್ಟದ ಚಿಕಿತ್ಸೆಯನ್ನು ರೋಗಿಗಳಿಗೆ ನೀಡಲಾಗುತ್ತಿದೆ.
ಗಂಗಾವತಿಯಂತ ತಾಲ್ಲೂಕು ಮಟ್ಟದ ಆಸ್ಪತ್ರೆಗೆ ಬಳ್ಳಾರಿ, ರಾಯಚೂರು, ಗದಗ, ವಿಜಯನಗರದ ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿರುವುದು ವಿಶೇಷ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ವಿಭಾಗ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಈಶ್ವರ ಶಿ.ಸವಡಿ ಆಸ್ಪತ್ರೆಯ ಎಲ್ಲಾ ವೈದ್ಯರು ಸೇರಿದಂತೆ ಪ್ರತಿಯೊಬ್ಬ ಸಿಬ್ಬಂದಿಯೂ ಪ್ರಮಾಣಿಕವಾಗಿ ಕೆಲಸ ಮಾಡಿದ್ದರಿಂದ ಕೇಂದ್ರ ಸರ್ಕಾರದ ಲಕ್ಷ್ಯ, ರಾಜ್ಯ ಸರ್ಕಾರದ ಕಾಯಕಲ್ಪ ದಂತ ಹಲವು ಪ್ರಶಸ್ತಿಗಳು ಸಿಕ್ಕಿವೆ. ಈ ಪ್ರಶಸ್ತಿಯಲ್ಲಿ ಸಿಬ್ಬಂದಿಗಳ ಪರಿಶ್ರಮ ಹಾಗೂ ತಾಲೂಕಿನ ಸರ್ವ ಜನತೆಯ ಸಹಕಾರ ಇದೇ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಗೌರಿಶಂಕರ್, ಕೊಪ್ಪಳ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ನಂದಾಕುಮಾರ್, ಹಾಗೂ ಆರೋಗ್ಯ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಇದ್ದರು.