ಹಾಲುಮತ ಸಮಾಜದ ಪೂಜಾರಿಗಳಿಗೆ ಶಿಬಿರ

ಕುಷ್ಟಗಿ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಡ್ಜ್ ಬಳಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಹಿನ್ನೆಲೆ ಹಾಲುಮತ ಧರ್ಮದ ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ಜನೆವರಿ 12ರಿಂದ ಮೂರು ದಿನಗಳ ಕಾಲ ವಿಶೇಷ ರಾಜಕೀಯೇತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಷ್ಟಗಿ ನಗರ ಘಟಕದ ಅಧ್ಯಕ್ಷ ಕಲ್ಲೇಶ ತಾಳದ ಅವರು ತಿಳಿಸಿದರು.
ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಗುರುವಾರ, ಕುಷ್ಟಗಿ ನಗರದ ಹಾಲುಮತ ಸಮಾಜದ ಪ್ರಮುಖರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಬೀರದೇವರ, ಶ್ರೀರೇವಣಸಿದ್ದೇಶ್ವರ, ಶ್ರೀಮೈಲಾರಲಿಂಗೇಶ್ವರ, ಶ್ರೀಮಾಳಿಂಗರಾಯ, ಶ್ರೀಅಮೋಘಸಿದ್ದೇಶ್ವರ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೂಜಾರಿಗಳಿಗೆ ಪೂಜಾ ಪದ್ಧತಿಗಳು ಸರಿಯಾಗಿ ಗೊತ್ತಿಲ್ಲದ ಕಾರಣ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನದ ಒಡನಾಟ ಕಡಿಮೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನಕಗುರು ಪೀಠದ ಶ್ರೀಗಳು ಪೂಜಾರಿಗಳಿಗೆ ಪೂಜಾ ಪದ್ಧತಿಗಳು, ವಿಧಿ-ವಿಧಾನಗಳ ಬಗ್ಗೆ ತರಬೇತಿ ನೀಡಲು ವಿಶೇಷ ಶಿಬಿರ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಹಾಗೂ ಸ್ವಾಗತಾರ್ಹವಾಗಿದೆ. ಶಿಬಿರದಲ್ಲಿ ಪೂಜ್ಯರು, ಉಪಕುಲಪತಿಗಳು, ವಾಗ್ಮಿಗಳು, ಸಂಶೋಧಕರು, ಉಪನ್ಯಾಸಕರು, ಕಲಾವಿದರು ಭಾಗವಹಿಸಿ ಹಾಲುಮತ ಧರ್ಮದ ಬಗ್ಗೆ, ವಿವಿಧ ದೇವರುಗಳ, ಸಿದ್ಧಿಪುರಷರ ಬಗ್ಗೆ ಹಾಗೂ ಪೂಜಾ ಪದ್ಧತಿ, ಮಂತ್ರಗಳ ಬಗ್ಗೆಯೂ ತಿಳಿಸಿಕೊಡಲಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಕುಷ್ಟಗಿ ತಾಲೂಕಿನ ಹಾಲುಮತ ಸಮಾಜದ ದೇವಸ್ಥಾನಗಳ ಪೂಜಾರಿಗಳು ಶಿಬಿರದಲ್ಲಿ ತಪ್ಪದೇ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಭಾಗವಹಿಸುವರು ಕನಕಗುರು ಪೀಠದ ಕರಪತ್ರದಲ್ಲಿ ನಮೋದಿಸಿರುವ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದರು.
ಹಾಲುಮತ ಸಂಸ್ಕೃತಿ ವೈಭವದ ಯಶಸ್ವಿಗೆ ಕುಷ್ಟಗಿ ನಗರದ ಹಾಲುಮತ ಸಮಾಜದ ಪ್ರತಿವರ್ಷದಂತೆ ಸಹಾಯ, ಸಹಕಾರ ಇರುತ್ತದೆ. ಈ ವರ್ಷವೂ ಕೂಡ ದವಸಧಾನ್ಯ, ಆಹಾರ ರ ಸಾಮಾಗ್ರಿಗಳನ್ನು ತಿಂಥಿಣಿಯ ಕನಕಗುರು ಪೀಠಕ್ಕೆ ಕಳಿಸಿಕೊಡಲಾಗುತ್ತದೆ ಎಂದರು.
ಈ ವೇಳೆ ಹಾಲುಮತ ಸಮಾಜದ ಪ್ರಮುಖರಾದ ದೇವಪ್ಪ ಕಟ್ಟಿಹೊಲ, ಹನುಮಂತಪ್ಪ ಹಳ್ಳಿ, ಸಂಗಪ್ಪ ಪಂಚಮ, ಶರಣಪ್ಪ ಸಂಗಟಿ, ಮುದಕಪ್ಪ ಚೂರಿ, ವಿಠ್ಠಲ ಚಳಗೇರಿ, ಕೊಳ್ಳಪ್ಪ ಬೂದ, ಪರಸಪ್ಪ ಗಧಾರಿ, ನಾಗಪ್ಪ ಕೋರಿ, ತೊಂಡೆಪ್ಪ ಇತರರು ಇದ್ದರು.

