ಗಂಗಾವತಿ.02. ಇದೆ ದಿನಾಂಕ 4.5.6 ರಂದು ನಡೆಯುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕೆಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಆರ್.ಹೆಚ್.ದೊಡ್ಡಮನಿ ಹೇಳಿದರು.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದ ಮೊಹರಂ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಗಂಗಾವತಿ ಗ್ರಾಮೀಣ ಮತ್ತು ಹೋಬಳಿ ಎಂದಿಗೂ ಶಾಂತಿ ಪ್ರಿಯತೆಗೆ ಹೆಸರಾದ ಪ್ರದೇಶವಾಗಿದೆ. ಇಲ್ಲಿ ಹಿಂದೂ-ಮುಸ್ಲಿಂ ಬಾಂಧವರೆಲ್ಲರೂ ಸೋದರ ಭಾವನೆಯಿಂದ ಬಾಳುತ್ತಿದ್ದು ಎಲ್ಲರೂ ಸೇರಿ ಹಬ್ಬಗಳನ್ನು ಮಾಡುತ್ತಿರುವುದನ್ನು ಕಂಡು ನನಗೆ ಖುಷಿಯಾಗಿದೆ ಆದ್ದರಿಂದ ಮುಂಬರುವ ಹಬ್ಬವನ್ನು ನೀವೆಲ್ಲರೂ ಸೇರಿ ಬಹಳಷ್ಟು ಸಡಗರ ಸಂಭ್ರಮಗಳಿಂದ ಆಚರಿಸಿರಿ. ಏನಾದರೂ ಅಹಿತಕರ ಘಟನೆಗಳು ಜರುಗಲಿವೆ ಎಂಬ ಸುಳಿವು ನಿಮಗೆ ಸಿಕ್ಕಲ್ಲಿ ನಿಮ್ಮ ಮಟ್ಟದಲ್ಲಿ ನೀವೇ ಬಗೆಹರಿಸಲು ಪ್ರಯತ್ನಿಸಿ, ನಿಮ್ಮ ಕೈ ಮೀರುವಂತೆ ಕಂಡರೆ ತಕ್ಷಣವೆ ಪೊಲೀಸ್ ಠಾಣೆಗೆ ತಿಳಿಸಿರಿ. ಇದರಿಂದ ಘಟನೆ ನಡೆಯುವ ಪೂರ್ವದಲ್ಲಿಯೆ ಅದನ್ನು ಎಲ್ಲರೂ ಸೇರಿ ತಡೆಯಬಹುದು ಪ್ರತಿ ಹಬ್ಬದ ಸಂದರ್ಭದಲ್ಲಿಯೂ ಇಲ್ಲಿನ ಹಿರಿಯರು ನೀಡುತ್ತಿರುವ ಸಹಕಾರ ಅಮೋಘವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಹಬ್ಬಗಳನ್ನು ಆಚರಿಸುವುದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹಬ್ಬವನ್ನು ಶಾಂತಿ ರೀತಿಯಿಂದ ಆಚರಣೆ ಮಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಿಸಿ ಕ್ಯಾಮರಾಗಳನ್ನು ಹಾಕಿಸುವಂತೆ ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು, ಹೀಗೇ ಸಹಕಾರ ನೀಡಿ ಇದನ್ನು ಮುನ್ನಡೆಸಿಕೊಂಡು ಹೋಗೋಣ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮುಖಂಡರು ಸೇರಿದಂತೆ ಇತರರು ಇದ್ದರು