ಸಚಿವ ತಂಗಡಗಿ ಅರೆಹುಚ್ಚ ಎಂದ ದಡೆಸ್ಗೂರವರೇ ಸೋತು ಹುಚ್ಚರಾಗಿದ್ದಾರೆ
ಕೊಪ್ಪಳ : ಕನ್ನಡ ಸಂಸ್ಕೃತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಜ ತಂಗಡಗಿ ಅವರು ಸಭ್ಯ ರಾಜಕಾರಣಿ ಮತ್ತು ಘನತೆಗೆ ತಕ್ಕಂತೆ ನಡೆದುಕೊಳ್ಳುವ ನಾಯಕ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬಸವರಾಜ ದಡೆಸ್ಗೂರ ಒಮ್ಮೆ ಅಕಸ್ಮಾತ್ ಶಾಸಕರಾಗಿದ್ದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದರೆ ಜನ ಅಷ್ಟು ಕೆಟ್ಟದಾಗಿ ಸೋಲಿಸುತ್ತಿರಲಿಲ್ಲ ಎಂಬ ಪರಿಜ್ಞಾನ ಇಟ್ಟುಕೊಂಡರೆ ಒಳಿತು, ಇನ್ನು ಅವರ ಅವಧಿಯಲ್ಲಿ ಯಾವೆಲ್ಲ ಹಗರಣಗಳು, ಸುದ್ದಿಗಳು ತಿಂಗಳುಗಟ್ಟಲೇ ಮಾಧ್ಯಮಗಳಲ್ಲಿ ಬಂದವು ಎಂಬುದನ್ನು ನೆನಪು ಮಾಡಿಕೊಂಡರೆ ಉತ್ತಮ.
ಇನ್ನು ತಂಗಡಗಿಯವರ ೧೧ ವರ್ಷದ ಅವಧಿಯಲ್ಲಿ ಅತ್ಯಧಿಕ ಕೆಲಸಗಳು ಆಗಿದ್ದು, ಅದಕ್ಕೆ ಜನ ಮತಗಳ ಮೂಲಕ ಒಪ್ಪಿಗೆ ಸೂಚಿಸಿದ್ದಾರೆ, ಅಲ್ಲದೇ ತಪ್ಪು ಮಾಡಿದ ಅಧಿಕಾರಿಗಳು ಅಮಾನತ್ತಾಗುವದು, ವಜಾ ಆಗೋದಕ್ಕೆ ಶಾಸಕರನ್ನಾಗಿ ಸಚಿವರನ್ನಾಗಲಿ ಹೊಣೆ ಮಾಡಲು ಆಗದು, ಅಧಿಕಾರಿಗಳು ತಪ್ಪು ಮಾಡಿದ್ದಕ್ಕೆ ಕಾನೂನಿನ ಪ್ರಕಾರ ಶಿಕ್ಷೆ ಆಗಿದೆ ಎಂಬುದರ ಮಾಹಿತಿ ಇರಲಿ. ತಮ್ಮ ಕೆಲಸಕ್ಕೆ ೨೦೨೩ರಲ್ಲಿ ಕನಕಗಿರಿ ಕ್ಷೇತ್ರದ ಜನ ನೀಡಿದ ಉತ್ತರ ಕಂಡು ಪೂರ್ತಿ ಹುಚ್ಚರಂತೆ ಆಗಿದ್ದು, ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದು ಜ್ಯೋತಿ ಕಿಡಿಕಾರಿದ್ದಾರೆ.
ತಂಗಡಗಿಯವರು ಕೇವಲ ಅಕ್ಷರಸ್ಥರಲ್ಲದೇ ವಿದ್ಯಾವಂತರಾಗಿದ್ದಾರೆ, ಕ್ಷೇತ್ರದ ಬಗ್ಗೆ ಅಲ್ಲಿನ ಜನರ ಬಗ್ಗೆ ಬಹಳ ಕಾಳಜಿ ಕಳಕಳಿ ಹೊಂದಿದ್ದಾರೆ, ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ದಾಖಲೆಯಷ್ಟೇ ಅಲ್ಲ, ಅಲ್ಲೇ ಹೋಗಿ ನೋಡಿದರೆ ಒಳ್ಳೆಯದು, ತಂಗಡಗಿಯವರು ಧ್ವೇಷದ ರಾಜಕಾರಣ ಮಾಡಿದ್ದರೆ ಕೊಪ್ಪಳದಲ್ಲಿ ಪೋಲಿಸ್ ಠಾಣೆಗಳು ಮತ್ತು ಜೈಲುಗಳು ಸಾಲುತ್ತಿರಲಿಲ್ಲ.
ಅಲ್ಲದೇ ಬಿಜೆಪಿ ಅವರಿಗೆ ಪದೇ ಪದೇ ಕೆಟ್ಟ ಭಾಷೆ ಬಳಸಿ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿದರೆ ಜನ ಭೇಸ್ ಎನ್ನುತ್ತಾರೆ ಎಂದುಕೊಂಡಿದ್ದರೆ ಅದು ದೊಡ್ಡ ಮೂರ್ಖತನವಾಗಲಿದೆ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಲ್ಲದ ಆರೋಪ ಮಾಡುವದು ರಾಜಕೀಯ ವ್ಯಕ್ತಿಯ ಗುಣವಲ್ಲ ಎಂದು ಮಾಜಿ ಶಾಸಕ ಬಸವರಾಜ ದಡೆಸ್ಗೂರ ಅವರಿಗೆ ತಿರುಗೇಟು ನೀಡಿದ್ದಾರೆ.