ಹರಕೆ ಹೆಸರಿನಲ್ಲಿ ಪ್ರಾಣಿ ಬಲಿ ತಪ್ಪು : ದಯಾನಂದ ಸ್ವಾಮೀಜಿ
aksharatvkannada news desk
ಕೊಪ್ಪಳ : ದೇವರು ಕರುಣಾಮಯಿ, ಪ್ರೇಮಾಮಯಿ ಆಗಿದ್ದು, ಧರ್ಮವು ಭಕ್ತಿಯ ತಳಹದಿ ಮೇಲೆ ನಿಂತಿದೆ, ಭಯದ ವಾತಾವರಣ ನಿರ್ಮಾಣ ಮಾಡುವುದು ಧರ್ಮವಲ್ಲ ಆದ್ದರಿಂದ ಹರಕೆಯ ಹೆಸರಿನಲ್ಲಿ ದೇವಿಗೆ ಪ್ರಾಣಿ ಬಲಿ ಕೊಡುವುದು ಬೇಡ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು. ಅವರು ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜರುಗಲಿರುವ ಜಾತ್ರೆಯಲ್ಲಿ ಭಕ್ತರು ಯಾವುದೇ ಕಾರಣಕ್ಕೂ ಪ್ರಾಣಿ ಬಲಿ ಮಾಡುವುದು ಬೇಡ, ಇದರ ಬಗ್ಗೆ ಜನರಲ್ಲಿ ಭಕ್ತ ಸಮೂಹಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಮ್ಮ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ವತಿಯಿಂದ ಯಾತ್ರೆ ಪ್ರಾರಂಭಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಶ್ರೀ ಹುಲಿಗಮ್ಮ ದೇವಿ ದೇವಸ್ಥಾನ ಸರ್ಕಾರದ ವ್ಯಾಪ್ತಿಯಲ್ಲಿದ್ದು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾಣಿ ಬಲಿ ಮಾಡಬಾರದು ಎಂದು ನ್ಯಾಯಾಲಯದ ಆದೇಶ ಕೂಡ ಇದೆ. ಕಾರಣ ಭಕ್ತರು ಪ್ರಾಣಿ ಬಲಿ ಮಾಡುವುದು ಸಂಪೂರ್ಣ ನಿಲ್ಲಿಸಬೇಕು ದೇವಿಗೆ ಭಕ್ತಿಯಿಂದ ಪೂಜೆ ಮಾಡುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದವರು. ಪ್ರಾಣಿಬಲಿ ತಡೆಯಲು ಜಿಲ್ಲಾಡಳಿತ , ಪೊಲೀಸ್ ಇಲಾಖೆ, ಅಧಿಕಾರಿ ವರ್ಗದವರು ಸಹಕಾರ ನೀಡುತ್ತಿದ್ದು ಇನ್ನಷ್ಟು ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಬೇಕೆಂದು ದಯಾನಂದ ಸ್ವಾಮೀಜಿ ಒತ್ತಾಯಿಸಿದರು.