ಕೋಮುವಾದಿ ಪಕ್ಷಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲರೂ ಕೈಜೋಡಿಸಿ
aksharatvkannada news desk:
ಕೊಪ್ಪಳ : ಚುನಾವಣಾ ಆಯೋಗದ ನಿರ್ಲಜ್ಜ ಪಕ್ಷಪಾತ ಹಾಗೂ ಕೋಮುವಾದಿ ಬಿಜೆಪಿ ಪಕ್ಷದ ಸರ್ವಾಧಿಕಾರಿ ನಡತೆಯ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಜನರಲ್ಲಿ ತೀವ್ರವಾದ ಆತಂಕ ಎದುರಾಗುವ ಸಂಭವ ಕಂಡುಬರುತ್ತವೆ. ಜನರಲ್ಲಿ ಕೋಮುವಾದಿ ಪಕ್ಷಗಳ ಬಗ್ಗೆ ಜಾಗೃತಿ ವಹಿಸಲು ಎಲ್ಲಾ ಪ್ರಗತಿಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಹೋರಾಟಗಾರ, ಸಾಹಿತಿ ಅಲ್ಲಮಪ್ರಭು ಬೆಟದೂರ ಕರೆ ನೀಡಿದರು.
ಅವರು ಬುದುವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ಬಿಜೆಪಿ ಸೋಲುತ್ತದೆ ಆದರೆ ಸುಲಭವಾಗಿ ಅಧಿಕಾರ ಹಸ್ತಾಂತರಿಸುವುದಿಲ್ಲ. ಮತ ಎಣಿಕೆಯಲ್ಲಿ ಮೋಸದ ಹಾಗೂ ಜನಾದೇಶದ ಉಲ್ಲಂಘನೆ ಹಾಗೂ ಕುದುರೆ ವ್ಯಾಪಾರದ ಸಾಧ್ಯತೆ ಕಂಡು ಬರುತ್ತದೆ ಎಂದು ಆರೋಪಿಸಿದರು.
ಜನಾಭಿಪ್ರಾಯವನ್ನು ರಕ್ಷಿಸಿಕೊಳ್ಳಲು ಜನ ಸಂಘಟನೆಗಳು ಮುಂದಾಗಲೇಬೇಕು, ನಿಷ್ಪಕ್ಷಪಾತ ಮತ ಎಣಿಕೆ ನಡೆಯುವಂತೆ ಆಯಾ ಜಿಲ್ಲಾಧಿಕಾರಿಗಳು ವಿಶೇಷ ಮುತ್ತುವರ್ಜಿವಹಿಸಬೇಕೆಂದು ಒತ್ತಾಯಿಸಲಾಗುವುದು ಎಂದರು. ಚುನಾವಣಾ ಆಯೋಗವು ಗಟ್ಟಿಯಾಗಿ ಉಳಿದಿಲ್ಲ ಪ್ರಾಮಾಣಿಕವಾಗಿಲ್ಲ ಎಂಬ ಸಂಶಯ ಕಾಡುತ್ತಿದೆ. ಪ್ರಧಾನಿ ಮೋದಿಯವರಿಗೆ ಸೋಲಿನ ಭೀತಿ ಎದುರಾಗಿದೆ. ಹತಾಶೆಯಿಂದ ಅವರು ಮಾತನಾಡುತ್ತಿದ್ದಾರೆ ಹೀಗಾಗಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಹುನ್ನಾರದಿಂದ ಕುತಂತ್ರ ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಹೀಗಾಗಿ ಜನರು, ಪ್ರಗತಿಪರರು, ಸಂಘಟನೆಗಳು ಕೋಮುವಾದಿ ಸಂಘಟನೆಗಳನ್ನು ತಿರಸ್ಕರಿಸಬೇಕು. ಅವರ ವಿರುದ್ಧ ನಿರಂತರ ಹೋರಾಟ ಕೈಗೊಳ್ಳಲು ನಮ್ಮೊಂದಿಗೆ ಕೈಜೋಡಿಸಬೇಕೆಂದು ಸಾಹಿತಿ ಅಲ್ಲಮಪ್ರಭು ಬೆಟದೂರ್ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ದುರ್ಗೇಶ್ ಬರಗೂರು, ಸುನಿಲ್ ಜೋಶಿ, ಶರಣು, ಯಮನೂರು ಇಳಿಗನೂರ್, ಚನ್ನಬಸಪ್ಪ ಜಾಲಿಹಾಳ್, ರಾಜು ನಾಯಕ್, ಅಶ್ಪಾಕ್ ಹುಸೇನ್, ಅನ್ಸರ್ ಪವನ್, ರೈತ ಮುಖಂಡರಾದ ಮರಿಯಪ್ಪ ಸಾಲೋನಿ, ಖಾಜಾಹುಸೇನ್ ಮುಲ್ಲಾ, ಭೀಮನಗೌಡ ಹೊನ್ನಾಪುರ ಅನೇಕರಿದ್ದರು.