ರಾಜ್ಯ ಪೆಂಚಾಕ್ ಸಿಲತ್ ಸಂಸ್ಥೆಗೆ ಹಿಟ್ನಾಳ, ಗೊಂಡಬಾಳ, ಬಯ್ಯಾಪೂರ ಆಯ್ಕೆ
aksharatvnewsdesk
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕು ಹನುಮಸಾಗರದ ಅಭಿನವ ತಿರುಪತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗಿದ ೧೧ನೇ ರಾಜ್ಯ ಪೆಂಚಾಕ್ ಸಿಲತ್ ಚಾಂಪಿಯನ್ಶಿಪ್ನಲ್ಲಿ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೆಂಚಾಕ್ ಸಿಲತ್ ಅಸೊಸಿಯೇಷನ್ಗೆ ಮೂವರನ್ನು ನೇಮಕ ಮಾಡಲಾಯಿತು.
ಓಲಂಪಿಕ್, ಏಷಿಯನ್ ಗೇಮ್ಸ್, ವರ್ಲ್ಡ್ ಗೇಮ್ಸ್, ಪೋಲಿಸ್ ಗೇಮ್ಸ್ ಸೇರಿದಂತೆ ಎಲ್ಲಾ ಬಗೆಯ ಕ್ರೀಡಾಕೂಟಗಳಲ್ಲಿ ಸ್ಥಾನ ಪಡೆದಿರುವ ಸಮರಕಲೆಯ ಪ್ರಕಾರವಾಗಿರುವ ಪೆಂಚಾಕ್ ಸಿಲತ್ ಅಸೊಸಿಯೇಷನ್ಗೆ ರಾಜ್ಯ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಕೊಪ್ಪಳ ಲೋಕಸಭೆ ಸದಸ್ಯರು, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಕೆ. ರಾಜಶೇಖರ ಹಿಟ್ನಾಳ ಅವರನ್ನು, ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು, ಕ್ರೀಡಾ ಉತ್ತೇಜಕರಾಗಿರುವ ಮಂಜುನಾಥ ಜಿ. ಗೊಂಡಬಾಳ ಅವರನ್ನು ಮತ್ತು ದಿಶಾ ಕಮಿಟಿ ಸದಸ್ಯರಾಗಿರುವ ಕುಷ್ಟಗಿಯ ಯುವ ಮುಖಂಡ ದೊಡ್ಡಬಸವನಗೌಡ ಬಯ್ಯಾಪೂರ ಅವರನ್ನು ರಾಜ್ಯ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆ ಮಾಡಿ ಸನ್ಮಾನಿಸಿ ಸಂಸ್ಥೆಗೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಪೆಂಚಾಕ್ ಸಿಲತ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ ಟೈಲರ್, ಪೆಂಚಾಕ್ ಸಿಲತ್ ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಹಂಚಿನಾಳ, ಮಣಿಪುರ ರಾಜ್ಯ ಹಿರಿಯ ತರಬೇತುದಾರ ಗೊಯಿನೊ, ಜಿಲ್ಲಾ ಕಾರ್ಯದರ್ಶಿ ಈರಣ್ಣ ಬಾದಾಮಿ, ಕೋಚ್ ಆಕಾಶ್ ದೊಡ್ಡವಾಡ ಮತ್ತು ಮಹ್ಮದ್ ಅಜರುದ್ದಿನ್, ರೇಣುಕಾ ಪುರದ, ೧೪ ಜಿಲ್ಲೆಯ ಕಾರ್ಯದರ್ಶಿಗಳು ಇತರರು ಇದ್ದರು.
ಸೆಪ್ಟೆಂಬರ್ ೨೫ ರಿಂದ ೨೮ರವರಗೆ ಪೆಂಚಾಕ್ ಸಿಲತ್ ರಾಷ್ಟ್ರೀಯ ಸಬ್ ಜೂನಿಯರ್ ಮತ್ತು ಜೂನಿಯರ್ ಚಾಂಪಿಯನ್ಶಿಪ್ ನಡೆಸಲಾಗುತ್ತಿದ್ದು, ೨೮ ರಾಜ್ಯ ೬ ಕೇಂದ್ರಾಡಳಿತ ಪ್ರದೇಶದ ಸುಮಾರು ೧೪೦೦ ಸ್ಪರ್ಧಾಳುಗಳು ಭಾಗವಹಿಸುತ್ತಿದ್ದು, ಅದಕ್ಕಾಗಿ ಸಂಘಟನೆಯನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಸಂಘಟಿಸಲಾಗುತ್ತಿದೆ.
ಇದೇ ಮೊದಲ ಬಾರಿಗೆ ಕೊಪ್ಪಳಕ್ಕೆ ದೇಶದ ಎಲ್ಲಾ ರಾಜ್ಯಗಳ ಮಕ್ಕಳು ಕೊಪ್ಪಳಕ್ಕೆ ಆಗಮಿಸುತ್ತಿದ್ದು, ಅದೊಂದು ರೀತಿಯ ಕ್ರೀಡಾ ಜಾತ್ರೆಯಾಗಲಿದೆ ಎಂದು ಪೆಂಚಾಕ್ ಸಿಲತ್ ಅಸೊಸಿಯೇಷನ್ ರಾಜ್ಯ ಅಧ್ಯಕ್ಷ ಜಗನ್ನಾಥ ಆಲಂಪಲ್ಲಿ ತಿಳಿಸಿದ್ದಾರೆ.