ವಾಲ್ಮೀಕಿ ಸಮಾಜಕ್ಕೆ ನ್ಯಾಯ ಒದಗಿಸಿರಿ : ಗೊಂಡಬಾಳ
ಕೊಪ್ಪಳ: ಜಿಲ್ಲೆಯ ಬಹುದೊಡ್ಡ ಸಮುದಾಯಗಳಲ್ಲಿ ವಾಲ್ಮೀಕಿ ನಾಯಕ ಸಮುದಾಯವೂ ಸಹ ಒಂದಾಗಿದ್ದು, ಅನೇಕ ಬೇಡಿಕೆಗಳ ಈಡೇರಿಕೆಗೆ ಕಾಯುತ್ತಿದೆ, ಅದಕ್ಕೆ ನ್ಯಾಯ ಒದಗಿಸುವಂತೆ ಸಮಾಜದ ಮುಖಂಡ ಮಂಜುನಾಥ ಜಿ. ಗೊಂಡಬಾಳ ಕೋರಿದ್ದಾರೆ.
ಜಿಲ್ಲೆಯ ಐದೂ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಮತದಾರರಿದ್ದು ಜನಸಂಖ್ಯೆಯೂ ಸಹ ಶೇ. ೧೧ ರಷ್ಟಿದೆ. ಜಿಲ್ಲೆಯ ಐತಿಹಾಸಿಕ ಕ್ಷೇತ್ರದಲ್ಲಿ ತಾಲೂಕಿನ ಜಬ್ಬಲಗುಡ್ಡದ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗದ ರಕ್ಷಣೆ ಅಗತ್ಯವಾಗಿದೆ, ಜಬ್ಬಲಗುಡ್ಡ ರೈಲು ನಿಲ್ದಾಣಕ್ಕೆ ಕುಮಾರರಾಮನ ಹೆಸರು ಇಡುವಂತೆ ಬಹಳ ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಈಡೇರಿಲ್ಲ. ಇನ್ನು ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಿನ್ನಾಳ ರಸ್ತೆಯ ಅಗಡಿ ಬಡಾವಣೆಯ ವಾಲ್ಮೀಕಿ ಭವನ ಮತ್ತು ಹಳೆ ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿರುವ ವಾಲ್ಮೀಕಿ ಭವನದ ಜೊತೆಗೆ ಟಣಕಲ್ ಹತ್ತಿರವಿರುವ ವಾಲ್ಮೀಕಿ ಸಮುದಾಯ ಭವನಗಳನ್ನು ಶೀಘ್ರ ಪೂರ್ಣಗೊಳಿಸಬೇಕು.
ವಾಲ್ಮೀಕಿ ಸಮುದಾಯದ ಧೀರ ಕನ್ನಡಿಗ ರಾಜ, ಕಂಪಿಲರಾಯನ ಮಗ ಪರನಾರಿ ಸಹೋದರ ಗಂಡುಗಲಿ ಕುಮಾರ ರಾಮ ಮತ್ತು ಮಹರ್ಷಿ ವಾಲ್ಮೀಕಿಯ ಎರಡು ವೃತ್ತಗಳನ್ನು ಮಾಡಿ ಅಲ್ಲಿ ಇವರ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಇದರ ಜೊತೆಗೆ ಬೂದಗುಂಪಾ ಕ್ರಾಸ್ ಬಳಿ ಸಹ ಗಂಡುಗಲಿ ಕುಮಾರರಾಮನ ಮೂರ್ತಿ ಹಾಗೂ ದ್ವಾರ ನಿರ್ಮಿಸಿ ಐತಿಹಾಸಿಕ ಕ್ಷೇತ್ರದ ಕುರುಹು ಉಳಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಕುಮಾರಾಮನ ವೃತ್ತ ಮತ್ತು ಮೂರ್ತಿ ನಿರ್ಮಿಸಲು ನಗರದ ತಹಶೀಲ್ದಾರ ಕಛೇರಿ ಬಳಿಯ ವೃತ್ತ ಸೂಕ್ತವಾಗಿದೆ. ಇನ್ನು ಹಲವು ದಶಕಗಳ ಹಿಂದೆಯೇ ವಾಲ್ಮೀಕಿ ವೃತ್ತ ಎಂದು ನಾಮಕರಣಗೊಂಡಿರುವ ಎಲ್ಐಸಿ ಪಕ್ಕದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಿಸಲು ಶಾಸಕರಾದ ರಾಘವೇಂದ್ರ ಹಿಟ್ನಾಳ ಅವರು ಮತ್ತು ಸಚಿವರಾದ ಶಿವರಾಜ ತಂಗಡಗಿ ಅವರು ತುರ್ತು ಕ್ರಮ ತೆಗೆದುಕೊಳ್ಳಬೇಕು, ಅಕ್ಟೋಬರ್ ೧೭ ರಂದು ವಾಲ್ಮೀಕಿ ಜಯಂತಿ ಇದ್ದು, ಅದರಲ್ಲಿ ಬೇಡಿಕೆಗಳ ಈಡೇರಿಕೆಗೆ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಮನವಿ ಮಾಡಿದ್ದಾರೆ.