ಬದಲಾವಣೆ ದಿನಪತ್ರಿಕೆ ವಿಶೇಷ: ಕೊಪ್ಪಳ:
ಹೌದು, ಸರಿಯಾಗಿ ನಿರ್ವಹಿಸಿದ್ದೇ ಆಗಿದ್ದಲ್ಲಿ ಆರು ತಿಂಗಳುಗಳ ಹಿಂದೆಯೇ ಶಮನವಾಗಬಹುದಾಗಿದ್ದ ಕಿಡಿಯೊಂದು ಈಗ ಬೆಂಕಿಯಾಗಿ ಬೆಳೆದು ಕಾಂಗ್ರೆಸ್ ಪಕ್ಷದ ಮಡಿಲನ್ನೇ ಸುಡುವ ಭೀತಿಯನ್ನು ಒಡ್ಡಿದೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯವೊಂದನ್ನು ಮಾತುಕತೆಯ ಮೂಲಕ ಸುಲಭವಾಗಿ ಪರಿಹರಿಸಬಹುದಿತ್ತು. ಆ ಕೆಲಸವನ್ನು ತಕ್ಷಣಕ್ಕೆ ಮಾಡದ್ದರಿಂದಲೇ ಅದೀಗ ತೀವ್ರ ಸ್ವರೂಪದ ಭಿನ್ನಮತಕ್ಕೆ ಕಾರಣವಾಗುವ ಅಪಾಯವನ್ನು ತಂದಿದೆ.
*ಘಟನೆಯ ಹಿನ್ನೆಲೆ*
೨೦೨೩ರ ವಿಧಾನಸಭಾ ಚುನಾವಣೆಗೆ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ನಡೆದಿದ್ದ ಪೈಪೋಟಿ ಒಳಜಗಳವಾಗಿ ಮಾರ್ಪಟ್ಟು, ನಾಯಕರ ನಡುವಿನ ಆಂತರಿಕ ತಿಕ್ಕಾಟದಿಂದಾಗಿ ಅನ್ಯಕ್ಷೇತ್ರದ ವ್ಯಕ್ತಿಯ ಗೆಲುವಿಗೆ ಕಾರಣವಾಗಿಬಿಟ್ಟಿತು. ಈ ಹಂತದಲ್ಲಿಯೇ ಭಿನ್ನಾಭಿಪ್ರಾಯವನ್ನು ಶಮನ ಮಾಡಿದ್ದರೆ, ಬಹುಶಃ ಇವತ್ತಿನ ಉಲ್ಬಣ ಪರಿಸ್ಥಿತಿಗೆ ಅದು ತಲುಪುತ್ತಿದ್ದಿಲ್ಲ ಎಂಬ ಅಭಿಪ್ರಾಯಗಳು ಪಕ್ಷದ ಗಂಗಾವತಿ ಘಟಕದಲ್ಲಿ ವ್ಯಕ್ತವಾಗುತ್ತಿವೆ.
ಅಭ್ಯರ್ಥಿ ಆಗಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಚುನಾವಣೆ ಸೋಲಿಗೆ ಸ್ವಯಂಕೃತ ತಪ್ಪುಗಳೇ ಕಾರಣ ಎಂಬ ಆರೋಪಗಳು ಫಲಿತಾಂಶದ ನಂತರ ಕೇಳಿಬಂದಿದ್ದವು. ಒಂದು ಕಾಲದಲ್ಲಿ ಅನ್ಸಾರಿ ಅವರ ಪರಮಾಪ್ತ ಬಳಗದಲ್ಲಿದ್ದ ನಗರಸಭೆ ಸದಸ್ಯ ಶಾಮೀದ್ ಮನಿಯಾರ್ ಹಾಗೂ ಮುಖಂಡ ಹನುಮಂತಪ್ಪ ಅರಸಿನಕೇರಿ ಅವರೇ ಈ ಬಹಿರಂಗ ಆರೋಪವನ್ನು ಮಾಡಿದ್ದರು.
ಆದರೆ, ಇದನ್ನು ಅಲ್ಲಗಳೆದಿದ್ದ ಪರಾಜಿತ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ನನ್ನ ಸೋಲಿಗೆ ನೀವು ಸೇರಿದಂತೆ ಸ್ವಪಕ್ಷದ ಕೆಲವು ನಾಯಕರೇ ಕಾರಣ ಎಂದು ವಾದಿಸಿದ್ದರು. ಅಷ್ಟೇ ಅಲ್ಲದೇ, ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ನ ಇತರ ನಾಯಕರಿಗೆ ದೂರನ್ನೂ ಸಲ್ಲಿಸಿದ್ದರು.
ಈ ಬೆಳವಣಿಗೆಗಳ ನಂತರ ಗಂಗಾವತಿ ಕ್ಷೇತ್ರದ ಕಾಂಗ್ರೆಸ ಅನಧಿಕೃತವಾಗಿ ಇಬ್ಬಾಗವಾದಂತಾಗಿದೆ. ಅವಕಾಶ ಸಿಕ್ಕಾಗೆಲ್ಲ ಉಭಯ ಬಣಗಳ ನಡುವೆ ವಾಗ್ಯುದ್ಧ ಕಾಣಿಸಿಕೊಳ್ಳುತ್ತಲೇ ಇದೆ. ಅದೀಗ ಉಲ್ಬಣಿಸಿದ್ದು, ಅನ್ಸಾರಿ ಅವರ ಹಿಂದಿನ ಬೆಂಬಲಿಗರು ‘ಇಕ್ಬಾಲ್ ಅನ್ಸಾರಿ ಸೋಲಿಗೆ ಕಾರಣಗಳು’ ಎಂಬ ಪುಸ್ತಕವನ್ನು ಸಿದ್ಧಗೊಳಿಸುತ್ತಿರುವ ಮಾಹಿತಿ ಬಂದಿದೆ. ಗಂಗಾವತಿಯಲ್ಲಿ ಕಾಂಗ್ರೆಸ್ ಸೋಲಿಗೆ ಅಭ್ಯರ್ಥಿಯೇ ಮುಖ್ಯ ಕಾರಣ ಎಂಬುದು ಈ ಪುಸ್ತಕದಲ್ಲಿರುವ ಪ್ರಮುಖ ಅಂಶ ಎನ್ನುತ್ತವೆ ಮೂಲಗಳು.
ಇಕ್ಬಾಲ್ ಅನ್ಸಾರಿಯವರ ತಪ್ಪುಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ಗೆ ಮಾಹಿತಿ ನೀಡಲು ಸಿದ್ಧವಾಗುತ್ತಿರುವ ಈ ಪುಸ್ತಕವನ್ನು ಇನ್ನು ಕೆಲ ದಿನದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿರುವ ಮಾಹಿತಿ ಇದೆ. ಬಹುಶಃ ಇದು ನೇರವಾಗಿ ಪಕ್ಷದ ನಾಯಕರ ಕೈ ಸೇರುವ ಸಾಧ್ಯತೆಗಳಿದ್ದು, ಅನಧಿಕೃತವಾಗಿ ಸೋರಿಕೆಯಾಗಿ ಸಾರ್ವಜನಿಕರ ಕೈಗೂ ತಲುಪುವ ಅಪಾಯವಿದೆ.
*ವ್ಯಕ್ತಿಗತ ಆರೋಪಗಳ ಪಟ್ಟಿ*
ಇಕ್ಬಾಲ್ ಅನ್ಸಾರಿ ಅವರನ್ನೇ ಕೇಂದ್ರವಾಗಿಟ್ಟುಕೊಂಡು, ಅವರ ದೋಷಗಳನ್ನು ಪುಸ್ತಕದಲ್ಲಿ ಉದಾಹರಣೆಗಳ ಸಹಿತ ವಿವರಿಸಲಾಗಿದೆ ಎಂಬ ಸುದ್ದಿ ಇದೆ. ಪುಸ್ತಕದಲ್ಲಿರುವ ಕೆಲ ಅಂಶಗಳನ್ನು ಅನ್ಸಾರಿ ವಿರೋಧಿ ಬಣ ಈಗಾಗಲೇ ಸೋರಿಕೆಯನ್ನೂ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇಕ್ಬಾಲ್ ಅನ್ಸಾರಿ ಅವರ ಋಣಾತ್ಮಕ ಅಂಶಗಳನ್ನು ಬಿಂಬಿಸುವ ಪತ್ರಿಕಾ ವರದಿಗಳು, ಲೇಖನಗಳು ಈ ಉದ್ದೇಶಿತ ಪುಸ್ತಕದಲ್ಲಿವೆ. ಕ್ಷೇತ್ರದ ಹಿರಿಯ ನಾಯಕರನ್ನು ಅವರು ಕಡೆಗಣಿಸಿದ ಆರೋಪಗಳಿವೆ. ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅವರನ್ನು ಸೌಜನ್ಯಕ್ಕೂ ಪ್ರಚಾರಕ್ಕೆ ಆಹ್ವಾನಿಸದಿರುವುದು, ರಾತ್ರಿ ವೇಳೆ ಪ್ರಚಾರ ಮಾಡುವುದು ಸೇರಿದಂತೆ ಹಲವಾರು ವಿಷಯಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಈ ಆರೋಪಗಳಿಗೆ ಪೂರಕವಾದ ಪತ್ರಿಕಾ ವರದಿಗಳನ್ನು ಸಹ ಮುದ್ರಿಸಲಾಗುತ್ತಿದೆ ಎನ್ನಲಾಗಿದೆ.
ಉದಾಹರಣೆಗೆ, ಅನ್ಸಾರಿ ಅವರು ಗ್ರಾಮೀಣ ಭಾಗಕ್ಕೆ ರಾತ್ರಿ ೮ ಗಂಟೆ ನಂತರವೇ ಪ್ರಚಾರಕ್ಕೆ ಹೋಗುತ್ತಿದ್ದ ಬಗ್ಗೆ ಸ್ವತಃ ಅವರ ಪ್ರವಾಸ ಪಟ್ಟಿಯನ್ನು ಪುಸ್ತಕದಲ್ಲಿ ಮುದ್ರಿಸಲಾಗಿದೆಯಂತೆ. ಇದರ ಹೊರತಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರು ಆಡಿದ ಮಾತುಗಳ ಬಗ್ಗೆಯೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
*ಸಮನ್ವಯದ ಕೊರತೆ*
ಹುಡುಕಿದರೆ ಬಹುತೇಕ ಎಲ್ಲಾ ಪಕ್ಷಗಳಲ್ಲಿಯೂ ಇಂತಹ ಆಂತರಿಕ ಭಿನ್ನಾಭಿಪ್ರಾಯಗಳನ್ನು ಕಾಣಬಹುದು. ಎಲ್ಲಾ ಕ್ಷೇತ್ರಗಳಲ್ಲಿಯೂ ಇಂತಹ ಒಂದಲ್ಲ ಒಂದು ಅಸಮಾಧಾನದ ಕಾರಣಗಳು ಸಿಗಬಹುದು. ಆದರೆ, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಬೇಗುದಿ ಈ ಪರಿ ಉಲ್ಬಣಗೊಳ್ಳಲು ಸಮಸ್ಯೆಯನ್ನು ಕಡೆಗಣಿಸಿದ್ದೇ ಮುಖ್ಯ ಕಾರಣ ಎಂಬ ಅಭಿಪ್ರಾಯಗಳು ಸಹ ವ್ಯಕ್ತವಾಗಿವೆ.
ಸಮನ್ವಯದ ಕೊರತೆಯೇ ಈ ಆಂತರಿಕ ಭಿನ್ನಾಭಿಪ್ರಾಯ ಉಲ್ಬಣಿಸಲು ಕಾರಣವಾಗಿದ್ದು, ಪಕ್ಷದ ನಾಯಕತ್ವ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಗಂಗಾವತಿಯೊಂದೇ ಅಲ್ಲ, ಅನ್ಯ ಕ್ಷೇತ್ರಗಳಲ್ಲಿಯೂ ಇರಬಹುದಾದ ಆಂತರಿಕ ಸಮಸ್ಯೆಗಳನ್ನು ಯಾವುದೇ ಪೂರ್ವಗ್ರಹವಿಲ್ಲದೇ ಪರಿಗಣಿಸಿ, ಅವನ್ನೆಲ್ಲ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಪರಿಹರಿಸಬೇಕಾದ ಅವಶ್ಯಕತೆಯಿದೆ.
ಇಲ್ಲದಿದ್ದರೆ ಆಂತರಿಕ ಭಿನ್ನಾಭಿಪ್ರಾಯವೆಂಬುದು ಮಡಿಲ ಕೆಂಡವಾಗಿ ಬದಲಾಗುವ ಅಪಾಯವಿದೆ.
———