ಫೆ. ೨೧ ರಂದು ಕಿತ್ತೂರಲ್ಲಿ “ನಾನು ಚನ್ನಮ್ಮ” ರಾಷ್ಟ್ರೀಯ ಅಭಿಯಾನ
ಕೊಪ್ಪಳ : ಇದೇ ಫೆ. ೨೧ ಕ್ಕೆ ಚನ್ನಮ್ಮನ ಸ್ವಾತಂತ್ರ್ಯದ ಕಿಚ್ಚು ಮೊಳಗಿ ಎರಡು ಶತಮಾನ ಕಳೆಯುವದರಿಂದ ದೇಶದ ಪ್ರಗತಿಪರ ಜನರೆಲ್ಲ ಸೇರಿ ಮಹಿಳಾ ಧೌರ್ಜನ್ಯ ಒಕ್ಕೂಟದ ನೇತೃತ್ವದಲ್ಲಿ ರಾಷ್ಟ್ರಮಟ್ಟದ “ನಾನು ಚನ್ನಮ್ಮ” ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಮಹಿಳೆಯರು ಮಾಧ್ಯಮಗೋಷ್ಠಿಯಲ್ಲಿ ತಿಳಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಒಂದೇ ದಿನ ಮಾಧ್ಯಮದವರ ಮೂಲಕ ಜನರಿಗೆ ಚನ್ನಮ್ಮನ ಕುರಿತು ಮಾಹಿತಿ ನೀಡುತ್ತಿದ್ದೇವೆ ಎಂದರು.
ಬ್ರಿಟೀಷರು ಕಿತ್ತೂರನ್ನು ಗೆಲ್ಲಲು ಇಲ್ಲಸಲ್ಲದ ಕಾನೂನು ಮಾಡಿದ್ದನ್ನು ಸಹಿಸದ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಸೈನ್ಯವನ್ನು ಸಜ್ಜು ಮಾಡಿ ಬ್ರಿಟಿಷರ ಮೇಲೆ ೧೮೨೪ ರಲ್ಲಿ ಯುದ್ಧ ಮಾಡಿದಳು. ಯುದ್ಧದಲ್ಲಿ ಥ್ಯಾಕರೆಯನ್ನು ಕೊಂದು ಕಿತ್ತೂರು ಉಳಿಸಿಕೊಂಡಳು. ರಾಣಿ ಚೆನ್ನಮ್ಮ ಬ್ರಿಟಿಷರ ವಸಾಹತುಶಾಹಿಯ ವಿರುದ್ಧ ಭಾರತದಲ್ಲಿ ಹೋರಾಡಿದ ಮೊಟ್ಟಮೊದಲ ಮಹಿಳಾ ಹೋರಾಟಗಾರರ ಪಟ್ಟಿಯಲ್ಲಿ ಬರುತ್ತಾಳೆ. ಕರ್ನಾಟಕದ ಜನಪದರಲ್ಲಿ ಅವರಿಗೆ ಸದಾ ಗೌರವ, ಅಭಿಮಾನದ ಸ್ಥಾನವಿದೆ. ವೀರರಾಣಿ ಎಂದೇ ಎಲ್ಲರೂ ಆಕೆಯನ್ನು ನೆನೆಯುತ್ತಾರೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ರಾಣಿ ಚೆನ್ನಮ್ಮನಿಗೆ ಒಂದು ಸ್ಥಿರವಾದ ಸ್ಥಾನವಿದೆ. ನಿರ್ಭಯ ವೀರಾಗ್ರಣಿಯಾದ ಚೆನ್ನಮ್ಮ ಇಂದಿಗೂ ಸ್ವಾತಂತ್ರ್ಯಪ್ರಿಯಳಾಗಿ ಬ್ರಿಟಿಷರಿಗೆ ನೀಡಿದ ಪ್ರತಿರೋಧದ, ಆತ್ಮಗೌರವದ ಹೆಗ್ಗುರುತಾಗಿ ನಿಲ್ಲುತ್ತಾಳೆ.
ರಾಣಿ ಚೆನ್ನಮ್ಮ ಸ್ವಾತಂತ್ರ್ಯದ ರಣಕಹಳೆಯನ್ನು ೧೮೨೪ರಲ್ಲಿ ಮೊಳಗಿಸಿ ಇಂದಿಗೆ ಎರಡು ನೂರು ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ದೇಶಾದ್ಯಂತ ರಾಣಿ ಚೆನ್ನಮ್ಮ ಅವರ ಪ್ರತಿರೋಧದ ವರ್ಷಾಚರಣೆಯನ್ನು ಮಹಿಳಾ ಸಮಾನತೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ, ಸಮ ಸಮಾಜಕ್ಕಾಗಿ ಹೋರಾಡುತ್ತಿರುವ ಅನೇಕ ಸಂಘಟನೆಗಳು ಮತ್ತು ವ್ಯಕ್ತಿಗಳು ಈ ಕಾರ್ಯಕ್ರಮ ನಡೆಸಲು ಒಟ್ಟುಗೂಡಿದರು. ನಮ್ಮ ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಸಂರಕ್ಷಿಸುವುದಕ್ಕಾಗಿ ಮತ್ತು ದ್ವೇಷ ಅಳಿಸಿ ಪ್ರೀತಿ ಬೆಳೆಸುವುದಕ್ಕಾಗಿ ಭಾರತದ ಎಲ್ಲಾ ಮೂಲೆಗಳಿಂದ ಮಹಿಳೆಯರು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೋರಾಟ ಮತ್ತು ಸಾಮಾಜಿಕ ಸಂಘಟನೆಯಲ್ಲಿ ನಿರತರಾಗಿರುವ ಅನೇಕ ಪ್ರಮುಖರು ಕಿತ್ತೂರಿನಲ್ಲಿ ನಡೆಯುವ ಜಾಥಾದಲ್ಲಿ ಭಾಗವಹಿಸುವರು. ಇಡೀ ಭಾರತದ ಮಹಿಳೆಯರು ಈ ಸಂದರ್ಭದಲ್ಲಿ ಕಿತ್ತೂರು ಘೋಷಣೆಯನ್ನು ಮೊಳಗಿಸಿ ಬಿಡುಗಡೆ ಮಾಡಿ ಸ್ವೀಕರಿಸುತ್ತಾರೆ.
ಕರ್ನಾಟಕದ ಹೆಮ್ಮೆಯ ರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಕೆಚ್ಚೆದೆಯ ಹೋರಾಟವನ್ನು ನೆನೆಯಲು ಮತ್ತು ಸ್ಫೂರ್ತಿ ಪಡೆಯಲು ೨೧/೦೨/೨೦೨೪ರಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಸಮಾಜ ಪರಿವರ್ತನ ಸಮುದಾಯ – ಧಾರವಾಡ, ಮಹಿಳಾ ಮುನ್ನಡೆ, ನಾವೆದ್ದು ನಿಲ್ಲದಿದ್ದರೆ, ರಾಷ್ಟ್ರ ಸೇವಾದಳ, ಸಮತಾ ವೇದಿಕೆ, ಸೌಹಾರ್ದ ಕರ್ನಾಟಕ, ಸ್ತ್ರೀ ಜಾಗೃತಿ ಸಮಿತಿ, ಸಂಕಲ್ಪ ಸಂಜೀವಿನಿ ಸಂಸ್ಥೆ, ಅವಳ ಹೆಜ್ಜೆ, ಬಹುತ್ವ ಕರ್ನಾಟಕ, ಭಾರತೀಯ ಮುಸ್ಲಿಂ ಮಹಿಳಾ ಅಂದೋಲನ, ಗುಜರಾತಿನ ಏಕಲ್ ನಾರಿ ಶಕ್ತಿ ಮಂಚ್, ವನ ಪಂಚಾಯತ್ ಸಂಘರ್ಷ ಸೇರಿ ಅನೇಕರು ಪಾಲ್ಗೊಳ್ಳುವರು.
ಗೋಷ್ಠಿಯಲ್ಲಿ ವಿಸ್ತಾರ ಸಂಸ್ಥೆ ನಿರ್ದೇಶಕಿ ಆಶಾ ವಿಸ್ತಾರ, ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಸಂಚಾಲಕಿ ಜ್ಯೋತಿ ಎಂ. ಗೊಂಡಬಾಳ, ಸಮಾಜ ಸೇವಕಿ ಸರೋಜಾ ಬಾಕಳೆ, ಪ್ರಗತಿಪರ ಹೋರಾಟಗಾರ್ತಿ ಸಲೀಮಾ ಜಾನ್, ಜಾಸ್ಮೀನ್, ಶಂಕರ ಇತರರು ಇದ್ದರು.