ಕೊಪ್ಪಳ: ವಾಲ್ಮೀಕಿ ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ಧಾರ್ಮಿಕ, ಐತಿಹಾಸಿಕ ಪುರಾವೆಗಳಿವೆ ಅಲ್ಲಿ ರಾಮ ಮತ್ತು ಹನುಮರಿಗೆ ಇರುವ ಅನಿಭಾವ ಸಂಬಂಧ ದೃಢಪಡಿಸಲು ಅಯೋಧ್ಯೆಯಲ್ಲಿ ರಾಮ ಕೊಪ್ಪಳದಲ್ಲಿ ಹನುಮ ಒಂದೇ ಶಿಲೆಯಲ್ಲಿ ಆಗಿವೆ ಎಂದು ಶ್ರೀ ಸಹಸ್ರ ಆಂಜನೇಯ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಅಭಿಪ್ರಾಯಪಟ್ಟರು.
ನಗರದ ಗವಿಶ್ರೀ ನಗರದಲ್ಲಿರುವ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರದ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಮಂದಿರದ ರಾಮನ ಮೂರ್ತಿ ಮಾಡಿದ ಶಿಲೆಯ ಉಳಿದ ಭಾಗದಲ್ಲಿ ಹನುಮನ ಮೂರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ ವೇಳೆ ಮಾತನಾಡಿದರು. ಈ ಭಾಗದಲ್ಲಿ ಇಡೀ ವಿಶ್ವದ ಹನುಮ ಭಕ್ತರು ಬರುವ ದಿನಗಳು ದೂರವಿಲ್ಲ, ಕೊಪ್ಪಳದ ಶ್ರೀ ಸಹಸ್ರಾಂಜನೇಯ ವಿಶ್ವದ ಅಗ್ರಗಣ್ಯ ದೇವಸ್ಥಾನವಾಗಲಿದೆ ಎಂಬುದು ಶತಸಿದ್ಧ ಎಂದರು.
ಪ್ರಕಾಶ ಶಿಲ್ಪಿ ಅವರು ಕೆತ್ತಿದ ಅಷ್ಟೂ ಮೂರ್ತಿಗಳು ಮುಂದಿನ ದಿನಗಳಲ್ಲಿ ಇಲ್ಲಿಯೇ ಪ್ರತಿಷ್ಠಾಪಿಸಲಾಗುತ್ತದೆ. ಇನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮಲಲ್ಲಾ ಮೂರ್ತಿಯ ಶಿಲೆಯನ್ನು ೨೦೨೨ರ ಡಿಸೆಂಬರ್ನಲ್ಲಿ ಮೊದಲಿಗೆ ಪ್ರಕಾಶ ಶಿಲ್ಪಿ ಅವರೇ ಪರೀಕ್ಷಿಸಿ ವಿಜಯದಾಸರ ಮೂರ್ತಿಗಾಗಿ ಕಲ್ಲನ್ನು ದೃಢಪಡಿಸಿದ್ದರು, ಅದೇ ಕಲ್ಲು ಅಯೋಧ್ಯೆಯಲ್ಲಿ ರಾಮನಾದ ಮೂರ್ತಿಯ ಶಿಲೆಯ ಉಳಿದ ಭಾಗ ಹನುಮನ ಜನ್ಮ ಸ್ಥಳದಲ್ಲಿ ಹನುಮನಾಗುತ್ತಿದ್ದಾನೆ ಎಂಬುದು ವಿಶೇಷ ಎಂದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಗವಿಶ್ರೀನಗರದ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರ ಇರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನಕ್ಕೆ ಅಯೋಧ್ಯೆಯ ರಾಮ ಮಂದಿರ ಶ್ರೀ ರಾಮಲಲ್ಲಾ ಮೂರ್ತಿಯ ಶಿಲೆಯ ಉಳಿದ ಭಾಗವನ್ನು ಮೆರವಣಿಗೆ ಮೂಲಕ ತರಲಾಯಿತು. ನಿತ್ಯ ಮೂರ್ತಿ ಸೇವಾ ಕಾರ್ಯದ ಭಾಗವಾಗಿ ೬೧೫೩ನೇ ಮೂರ್ತಿಯನ್ನು ಶ್ರೀ ಪ್ರಕಾಶ್ ಶಿಲ್ಪಿ ಅವರು ಕೆತ್ತನೆ ಮಾಡಿ ಪಂಚಾಮೃತ ಅಭಿಷೇಕ ಮಾಡಲಾಯಿತು.
ನಂತರ ಭಗವಂತನ ಇಚ್ಚೆ ಅನುಸಾರ ಮೂರು ಶಿಲೆಯಲ್ಲಿ ಹನುಮ, ಸೀತಾರಾಮ ಮತ್ತು ಹನುಮನ ಉತ್ತರದಂತೆ ಮೂರ್ತಿಗಳನ್ನು ಮಾಡಿ ಪ್ರತಿಷ್ಠಾಪಿಸಲಾಗುವುದು. ಅಯೋಧ್ಯೆಯ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನ ಮುಹೂರ್ತದಲ್ಲಿಯೇ ಈ ಶಿಲೆಗಳಿಗೆ ಕಚ್ಚು ಹಾಕಿ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರು ಮತ್ತು ಆಂಜನೇಯನ ಆರಾಧಕರಾದ ಶ್ರೀ ಪ್ರಕಾಶ್ ಶಿಲ್ಪಿ, ಮಾಜಿ ಎಮ್.ಎಲ್.ಸಿ. ಕರಿಯಣ್ಣ ಸಂಗಟಿ, ಮುಖಂಡರುಗಳಾದ ಮಂಜುನಾಥ ಅಂಗಡಿ, ಸಂಗಮೇಶ್ ಬಾದವಾಡಗಿ, ರುದ್ರಪ್ಪ ಬಡಿಗೇರ, ಜ್ಯೋತಿ ಎಂ. ಗೊಂಡಬಾಳ, ಮಹಾಂತೇಶ ಸಂಗಟಿ, ರವಿ ಗದಗ, ವಿರೇಶ ಚೋಳಪ್ಪನವರ, ಪವನ, ಪ್ರಸನ್ನ, ಪುನೀತ ಸೇರಿ ಅನೇಕರು ಇದ್ದರು. ಗಿಣಗೇರಿಯ ಸುಬ್ಬಾಣ್ಣಾಚಾರ್ ಅವರು ಮಂತ್ರಘೋಷಗಳ ಮೂಲಕ ಪೂಜೆ ನೆರವೇರಿಸಿಕೊಟ್ಟರು.