ಕೇಂದ್ರ, ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಕೊಪ್ಪಳ: ಕೇಂದ್ರ ಸರ್ಕಾರ ರಾಜಭವನ ದುರ್ಬಳಕೆ ಮಾಡಿಕೊಳ್ಳುತ್ತಿದೆ, ರಾಜಕೀಯ ಭವನವಾದ ರಾಜಭವನ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಲ್ಲಿನ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಯಿತು.
ಸೋಮುವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಜ ತಂಗಡಗಿ ಅವರ ನೇತೃತ್ವದಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಗಣಿ ಹಗರಣದ ಪ್ರಾಸಿಕ್ಯೂಷನ್ ಯಾವಾಗ?, ಮೊಟ್ಟೆ ಹಗರಣದ ತನಿಖೆ ಯಾವಾಗ? ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಎನ್ನುವ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿ ರಾಜ್ಯಪಾಲರ ಚಿತ್ರವಿರುವ ಭಿತ್ತಿ ಪತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸಿಕ್ಯೂಷನ್ ಹೆಸರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಗಾಲಿಜನಾರ್ದನ ರೆಡ್ಡಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜಭವನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಹಿಂದ ನಾಯಕನ ಶಕ್ತಿ ಹತ್ತಿಕ್ಕಲು ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ ಮಾಡುತ್ತಿದೆ ಎಂದು ಪಕ್ಷದ ನಾಯಕರು ಆರೋಪಿಸಿದರು. ಆಶೋಕ ವೃತ್ತದಿಂದ ಗಂಜ್ ಸರ್ಕಲ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ಕೆ. ರಾಜಶೇಖರ ಹಿಟ್ನಾಳ, ಮಾಜಿಸಚಿವ ಇಕ್ಬಾಲ್ ಅನ್ಸಾರಿ ಸೇರಿದಂತೆ ಅನೇಕರು ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಮಾಲತಿ ನಾಯಕ, ರಡ್ಡಿ ಶ್ರೀನಿವಾಸ್, ಜ್ಯೋತಿ ಎಂ. ಗೊಂಡಬಾಳ, ಕೃಷ್ಣಾ ಇಟ್ಟಂಗಿ, ವಿಶಾಲಾಕ್ಷಿ ತಾವರಗೇರಾ, ಗೂಳಪ್ಪ ಹಲಗೇರಿ, ರೇಶ್ಮಾ ಖಾಜಾವಲಿ, ಸುಮಂಗಲಾ ನಾಯಕ, ಗಾಳೆಪ್ಪ ಪೂಜಾರ, ರಮೇಶ ನಾಯಕ, ಗಂಗಾಧರಯ್ಯ ಕನಕಗಿರಿ, ಸೌಭಾಗ್ಯಲಕ್ಷ್ಮೀ ಗೊರವರ, ಮಲ್ಲು ಪೂಜಾರ ಅನೇಕರು ಪಾಲ್ಗೊಂಡಿದ್ದರು.