ಬದಲಾವಣೆ ಸುದ್ದಿ
ಕೊಪ್ಪಳ: ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕೊನೆಯದು ಎನ್ನಲಾದ ಚುನಾವಣೆಗೆ ಸಜ್ಜಾಗುತ್ತಿರುವ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಸಿಗುವುದು ಈ ಕ್ಷಣಕ್ಕೂ ಅನುಮಾನಾಸ್ಪದವಾಗಿಯೇ ಇದೆ. ಇಷ್ಟೊಂದು ಅವಧಿಯವರೆಗೆ ಸಕ್ರಿಯ ರಾಜಕೀಯದಲ್ಲಿದ್ದಾಗ್ಯೂ, ಟಿಕೆಟ್ ಪಡೆಯುವ ಖಾತರಿ ಇಲ್ಲದಿರುವುದು ಅವರ ರಾಜಕೀಯ ಜೀವನದ ವೈಫಲ್ಯಕ್ಕೆ ಹಾಗೂ ಟಿಕೆಟ್ ಸ್ಪರ್ಧೆಯಲ್ಲಿ ಅವರೇ ಮುಂಚೂಣಿಯಲ್ಲಿರುವುದು ಅವರ ಸಾಧನೆಗೆ ನಿದರ್ಶನವಾಗಿದೆ.
ಪೂರ್ಣಾವಧಿ ರಾಜಕಾರಣಿಯಾಗಿರುವ ಸಂಗಣ್ಣ ಕರಡಿ ಅವರಿಗೆ ಈ ಸಲದ ಲೋಕಸಭಾ ಚುನಾವಣೆ ಅಸ್ತಿತ್ವದ ಪ್ರಶ್ನೆ. ಪಕ್ಷ ಯಾವುದೇ ಆಗಿರಲಿ, ಅವರು ಈ ಸಲ ಸ್ಪರ್ಧಿಸದಿದ್ದರೆ, ಕರಡಿ ಕುಟುಂಬ ರಾಜಕೀಯ ನೇಪಥ್ಯಕ್ಕೆ ಸರಿಯುವ ಅಪಾಯವಿದೆ. ಈಗಾಗಲೇ ತಮ್ಮ ಮಗ ಅಮರೇಶ ಕರಡಿ ಹಾಗೂ ಸೊಸೆ ಮಂಜುಳಾ ಅಮರೇಶ ಕರಡಿ ಅವರನ್ನು ಕಣಕ್ಕಿಳಿಸಿ, ಅವರ ಸೋಲನ್ನು ಕಂಡಿರುವ ಸಂಗಣ್ಣನವರಿಗೆ, ಈ ಸಲ ತಾವು ಸ್ಪರ್ಧಿಸದಿದ್ದರೆ, ತಮ್ಮ ಸುದೀರ್ಘ ರಾಜಕೀಯ ಬದುಕು ಅಂತ್ಯವಾಗುತ್ತದೆ ಎಂಬ ಭೀತಿ ಕಾಡತೊಡಗಿದೆ.
ಹೀಗಾಗಿ ಅವರು ಯಾವುದೇ ರಾಜಿಗೆ ಸಿದ್ಧರಿಲ್ಲ. ಶತಾಯಗತಾಯ ಪ್ರಯತ್ನಿಸಿ ಬಿಜೆಪಿಯ ಟಿಕೆಟ್ ಪಡೆಯಲು ಅವರು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ. ಇದು ಅವರ ಪ್ಲ್ಯಾನ್-ಎ. ಇನ್ನು ಪ್ಲ್ಯಾನ್-ಬಿ ಎಂದರೆ, ಬಿಜೆಪಿ ಟಿಕೆಟ್ ಕೈತಪ್ಪಿದರೆ, ಅನ್ಯಪಕ್ಷದಿಂದ ಸ್ಪರ್ಧೆಗೆ ಇಳಿಯುವುದು.
*ಎರಡು ಪ್ಲ್ಯಾನ್ಗಳು*
ಬಿಜೆಪಿಯ ಟಿಕೆಟ್ಟನ್ನೇ ಪಡೆಯುವ ಅವರ ಪ್ಲ್ಯಾನ್-ಎ ಫಲಿಸುವುದು ಈ ಸಲ ಅನುಮಾನಾಸ್ಪದವಾಗಿಯೇ ಇದೆ. ಇನ್ನು ಪ್ಲ್ಯಾನ್-ಬಿ ಅನ್ವಯಿಸಬೇಕೆಂದರೆ, ಅವರ ಬಳಿ ಇರುವುದು ಕಾಂಗ್ರೆಸ್ ಸೇರ್ಪಡೆಯ ಅನಿವಾರ್ಯ ಹಾದಿ ಮಾತ್ರ.
ಏಕೆಂದರೆ, ಈಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಹೀಗಾಗಿ, ಸಂಗಣ್ಣ ಕರಡಿ ಅವರು ಜೆಡಿಎಸ್ಗೆ ಹೋಗುವುದು ಸಾಧ್ಯವಿಲ್ಲ. ಅಲ್ಲದೇ ಆ ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿರುವ ಸಿ.ವಿ. ಚಂದ್ರಶೇಖರ್ ಅವರ ಬದ್ಧ ಎದುರಾಳಿಯಾಗಿರುವುದರಿಂದ, ಒಂದೊಮ್ಮೆ ಬಯಸಿದರೂ ಜೆಡಿಎಸ್ ಬಾಗಿಲು ಅವರಿಗೆ ತೆರೆಯುವುದು ಕಷ್ಟಕರ.
ಉಳಿದಿರುವುದು ಕಾಂಗ್ರೆಸ್ ಪಕ್ಷವೊಂದೇ. ಈ ಆಯ್ಕೆಗೆ, ಅಂದರೆ ಪ್ಲ್ಯಾನ್-ಬಿಗೆ ಅವರು ಮುಂದಾಗುವುದು ಬಿಜೆಪಿಯ ಟಿಕೆಟ್ ಕೈತಪ್ಪಿದಲ್ಲಿ ಮಾತ್ರ. ಆದರೆ, ಕಾಂಗ್ರೆಸ್ ಪಕ್ಷದಲ್ಲಿಯೇ ಟಿಕೆಟ್ಗಾಗಿ ತೀವ್ರ ಸ್ಪರ್ಧೆ ಇರುವುದರಿಂದ, ಸಂಗಣ್ಣ ಕರಡಿ ಆ ಎಲ್ಲಾ ಸ್ಪರ್ಧಿಗಳಿಗೆ ಅನಪೇಕ್ಷಿತ ಅತಿಥಿ.
*ಟಿಕೆಟ್ ಇಲ್ಲವೇ ರಾಜಕೀಯ ನೇಪಥ್ಯ*
ಇಂತಹ ಎಲ್ಲಾ ಗೊಂದಲಗಳ ಮಧ್ಯದಲ್ಲಿ, ಬಿಜೆಪಿಯಿಂದ ಮೂರನೇ ಸಲ ಲೋಕಸಭಾ ಟಿಕೆಟ್ ಪಡೆಯುವ ಪ್ರಯತ್ನವನ್ನು ಮುಂದುವರಿಸಿದ್ದಾರೆ ಸಂಗಣ್ಣ ಕರಡಿ. ಆದರೆ, ಅಲ್ಲಿ ಅವರಿಗೆ ಹೆಜ್ಜೆಹೆಜ್ಜೆಗೂ ಸವಾಲುಗಳು ಎದುರಾಗತೊಡಗಿವೆ. ಪಕ್ಷದ ಇತರ ಸಮರ್ಥ ನಾಯಕರು ಬೆಳೆಯಲು ಬಿಡಲಿಲ್ಲ ಎಂಬುದಷ್ಟೇ ಅಲ್ಲ, ಶಾಸಕರಾಗಿ ಹಾಗೂ ಸಂಸದರಾಗಿ ಸುದೀರ್ಘ ಕಾಲ ಅಧಿಕಾರದಲ್ಲಿದ್ದರೂ, ಪಕ್ಷವನ್ನು ಬಲಪಡಿಸಲಿಲ್ಲ ಎಂಬ ಗಂಭೀರ ಆರೋಪವೂ ಅವರಿಗೆ ಸವಾಲಾಗಿದೆ. ಬಿಜೆಪಿಯಲ್ಲಿ ಎರಡನೇ ಹಂತದ ನಾಯಕರೇ ಇಲ್ಲದಿರುವುದು ಸಂಗಣ್ಣ ಅವರ ಸರ್ವಾಧಿಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯೂ ಹೌದು.
*ರಾಜಕೀಯ ಬದುಕಿನ ವೈಫಲ್ಯ*
ಕೊಪ್ಪಳ ವಿಧಾನಸಭಾ ಕ್ಷೇತ್ರವಷ್ಟೇ ಅಲ್ಲ, ಲೋಕಸಭಾ ಕ್ಷೇತ್ರದಾದ್ಯಂತ ಬಿಜೆಪಿ ಸೊರಗಿದೆ. ಅದನ್ನು ಬಲಪಡಿಸುವ ಯಾವ ಪ್ರಯತ್ನವನ್ನೂ ಮಾಡದಿರುವ ಆರೋಪಗಳು ಸಂಗಣ್ಣ ಕರಡಿಯವರ ಮೇಲಿವೆ. ಸಂಭವನೀಯ ಎದುರಾಳಿಗಳನ್ನು ವಾಮಮಾರ್ಗದಿಂದ ತುಳಿಯುತ್ತಾ, ಪಕ್ಷವನ್ನು ಬೇರುಮಟ್ಟದಿಂದ ಬಲಪಡಿಸುವ ಯಾವ ಪ್ರಯತ್ನಗಳನ್ನೂ ಮಾಡದೇ ಅವರು ಅಧಿಕಾರವನ್ನು ತಮ್ಮ ಹಾಗೂ ತಮ್ಮ ಕುಟುಂಬದ ಹಿಡಿತದಲ್ಲಿಯೇ ಇಟ್ಟುಕೊಂಡಿರುವ ಆರೋಪಗಳನ್ನು ಹೊತ್ತಿದ್ದಾರೆ. ಈಗ ಚುನಾವಣೆ ಸಮಯದಲ್ಲಿ, ಅವೆಲ್ಲ ಆರೋಪಗಳು ಸಕ್ರಿಯವಾಗಿದ್ದು, ಯಾವ ಕಾರಣಕ್ಕೂ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಕೊಡಬಾರದು ಎಂದು ಬಹಿರಂಗವಾಗಿಯೇ ಆಗ್ರಹಿಸುವ ಹಂತಕ್ಕೆ ಹೋಗಿಬಿಟ್ಟಿವೆ.
ಹೀಗಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿಯ ಸಂಭವನೀಯ ಅಭ್ಯರ್ಥಿ ಯಾರೆಂಬುದು ಈಗಲೂ ಅಸ್ಪಷ್ಟವಾಗಿಯೇ ಇದೆ. ಚುನಾವಣೆ ಬಂದಾಗಷ್ಟೇ ಸಕ್ರಿಯವಾಗುವ ಕೆಲವು ಟಿಕೆಟ್ ಆಕಾಂಕ್ಷಿಗಳ ಹೊರತಾಗಿ, ಸಂಗಣ್ಣನವರಿಗೆ ಸಮಬಲದ ಸ್ಪರ್ಧೆ ಒಡ್ಡಬಲ್ಲ ಯಾವೊಬ್ಬ ಅಭ್ಯರ್ಥಿಯೂ ಅಲ್ಲಿ ಕಾಣಿಸುತ್ತಿಲ್ಲ. ಸಂಗಣ್ಣನವರಿಗೆ ಅವರ ಇದುವರೆಗಿನ ರಾಜಕೀಯ ಶೈಲಿಯೇ ಶತ್ರುವಾಗಿ ಪರಿಣಮಿಸಿದ್ದರಿಂದ, ಈ ಸಲವೂ ಟಿಕೆಟ್ ಅವರಿಗೇ ಎಂಬ ವಾತಾವರಣವೇ ಕಾಣಿಸದಂತಾಗಿದೆ. ಇದ್ದೊಬ್ಬ ಸಂಭವನೀಯ ನಾಯಕ ಸಿ.ವಿ. ಚಂದ್ರಶೇಖರ್ ಅವರನ್ನು ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂಬಂತಹ ವಾತಾವರಣ ಸೃಷ್ಟಿಸುವ ಮೂಲಕ ಅವರು ಜೆಡಿಎಸ್ಗೆ ಪಕ್ಷಾಂತರವಾಗುವಂತೆ ಮಾಡಿರುವ ಸಂಗಣ್ಣ ಕರಡಿ ಅವರು, ಈಗ ಸ್ವತಃ ತಾವೇ ಅತಂತ್ರವಾಗುವ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ.
ಬಿಜೆಪಿಯ ಅಭ್ಯರ್ಥಿ ಯಾರೇ ಆಗಲಿ, ಅವರ ಹೆಸರನ್ನು ಪಕ್ಷ ಸಾಕಷ್ಟು ಮುಂಚೆಯೇ ಘೋಷಿಸದಿದ್ದರೆ, ಈ ಸಲದ ಲೋಕಸಭಾ ಚುನಾವಣೆ ಬಿಜೆಪಿ ಪಾಲಿಗೆ ದುಬಾರಿಯಾಗಿ ಪರಿಣಮಿಸುವ ವಾತಾವರಣವಿದೆ. ಇಂಥದೇ ವಾತಾವರಣ ಕಾಂಗ್ರೆಸ್ನಲ್ಲಿಯೂ ಇದೆ ಎಂಬುದೇ ಈ ಸಲದ ಲೋಕಸಭಾ ಚುನಾವಣೆಯ ವೈಶಿಷ್ಟ್ಯತೆ.
———